ಕನ್ನಡ ವಾರ್ತೆಗಳು

ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದಿಸಿ, ನೀತಿ ನಿಯಮಗಳನ್ನು ಪಾಲಿಸಿ : ಐವನ್ ಡಿ.ಸೋಜ

Pinterest LinkedIn Tumblr

sri_devi_eduction_1a

ಮಂಗಳೂರು,ಜ.17: ವೈದ್ಯಕೀಯ ಶಿಕ್ಷಣ ಪದವೀಧರರು ಅಪೇಕ್ಷಿತ ಪ್ರಮಾಣದ ಜ್ಞಾನ ಮತ್ತು ಸೂಕ್ತ ಮಟ್ಟದ ಕೌಶಲ್ಯವನ್ನು ಸಂಪಾದಿಸಬೇಕು ಮತ್ತು ತಮ್ಮ ವೃತ್ತಿ ಜೀವನದಲ್ಲಿ ವೈದ್ಯಕೀಯ ನೀತಿ-ನಿಯಮಗಳನ್ನು ಪಾಲಿಸಿದರೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅದಕ್ಕನುಗುಣವಾಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ವಿದ್ಯಾರ್ಥಿಗಳಿಗೆ ದಾರೆಯೆರೆಯಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ.ಸೋಜ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಶನಿವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಜರಗಿದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಎಮ್.ಪಿ.ಟಿ., ಬಿ.ಪಿ.ಟಿ., ಎಮ್.ಎಸ್ಸಿ. ನರ್ಸಿಂಗ್, ಎಮ್. ಫಾರ್ಮ, ಬಿ. ಫಾರ್ಮ ಕಾಲೇಜಿನ ಪದವಿ ಪ್ರದಾನ ಮತ್ತು ಜ್ಯೋತಿ ಪ್ರಜ್ವಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವೈದ್ಯಕೀಯ ಶಿಕ್ಷಣ ಪದವೀಧರರಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆ ಮತ್ತು ವಿಪುಲ ಅವಕಾಶಗಳಿವೆ ಎಂದು ನುಡಿದು, ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಿ, ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

sri_devi_eduction_2a

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧರಾಗಿದ್ದೇವೆ ಎಂಬ ಆಶ್ವಾಸನೆ ನೀಡಿದರು.

sri_devi_eduction_3

ಶ್ರೀದೇವಿ ಫಾರ್ಮಸಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ಜಗದೀಶ್ ಕಾಮತ್ ಸುಮಾರು 125  ನೂತನ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ನರ್ಸಿಂಗ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ಬಿಬಿಯಾನ ವಿಜಯ್ ನೂತನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಿ, ನರ್ಸಿಂಗ್ ವೃತ್ತಿಯವರ ಆರಾಧಕಿಯವರಾದ ಫ್ಲೋರೆನ್ಸ್ ನೈಟಿಂಗೇಲ್‌ರವರ ಆದರ್ಶ, ಧ್ಯೇಯ, ಸಿದ್ಧಾಂತಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.

sri_devi_eduction_4a

ಸ್ನಾತಕೋತ್ತರ ಪದವೀಧರರಾದ ವಿವೇಕ್, ಪ್ರಿನ್ಸಿ ರಾಜನ್, ಶರಣ್ಯ, ಶಾರನ್ ಮಾಥ್ಯು ಮತ್ತು ನಿಶಾ ತಮ್ಮ ಶೈಕ್ಷಣಿಕ ಅನುಭವ ಮತ್ತು ಸವಿನೆನಪುಗಳನ್ನು ಸ್ಮರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನಿಧೀಶ್ ಶೆಟ್ಟಿ, ಕಾರ್ಯದರ್ಶಿಯವರಾದ ಶ್ರೀಮತಿ ಮೈನಾ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಪ್ರಿಯಾಂಕ ಶೆಟ್ಟಿ ಹಾಗೂ ಪ್ರಾಂಶುಪಾಲ ಡಾ| ವಿಜಯ್ ಉಪಸ್ಥಿತರಿದ್ದರು.

sri_devi_eduction_5

ಸಹಾಯಕ ಉಪನ್ಯಾಸಕಿ ಶ್ರೀಮತಿ ಎಡ್ವಿನಾ ಮೋನಿಸ್ ಸ್ವಾಗತಿಸಿದರು. ಕು| ಜುಡಿತ್ ಹಾಗೂ ಕು| ಅನೀಶ್ನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ಕುಲಕರ್ಣಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.

Write A Comment