ಕನ್ನಡ ವಾರ್ತೆಗಳು

ಅಕ್ಷಯ ಪಾತ್ರೆಗೆ ಯೋಜನೆಗೆ ಇನ್ಫೋಸಿಸ್ ಮತ್ತು ಟಾಟಾ ಸಂಸ್ಥೆಯಿಂದ ರೂ.200 ಕೋಟಿ ನೆರವು

Pinterest LinkedIn Tumblr

Akshaya_Patra_Foundation

ಬೆಂಗಳೂರು,ಜ.15 : ಇಸ್ಕಾನ್ ಸಂಸ್ಥೆ ನಡೆಸುತ್ತಿರುವ ಅಕ್ಷಯ ಪಾತ್ರೆ ಯೋಜನೆಗೆ ಐಟಿ ದಿಗ್ಗಜ ಇನ್ಫೋಸಿಸ್ ಹಾಗೂ ಟಾಟಾ ಸಂಸ್ಥೆಗಳು 200 ಕೋಟಿ ನೆರವು ನೀಡಿದೆ.

ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆಗೆ ಹೈಟೆಕ್ ಸ್ಪರ್ಶ ನೀಡಲು ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ದೇಶಾದ್ಯಂತ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್ ಪೂರೈಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಇದರ ಲಾಭ ಪಡೆಯುತ್ತಿದ್ದಾರೆ. ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಟಾಟಾ ಟ್ರಸ್ಟ್ ಕ್ರಮವಾಗಿ 147 ಕೋಟಿ ಹಾಗೂ 55 ಕೋಟಿ ದಾನ ಮಾಡಿವೆ.

ಈಗ ಯೋಜನೆ ಚಾಲ್ತಿಯಲ್ಲಿರುವೆಡೆ ಇನ್ನಷ್ಚು ತಾಂತ್ರಿಕ ಬದಲಾವಣೆ ತಂದು ಹೆಚ್ಚಿನ ವಿದ್ಯಾರ್ಥಿಗಳನ್ನು ಮುಟ್ಟುವ ಗುರಿ ಇರಿಸಿಕೊಳ್ಳಲಾಗಿದೆ. ಪರಿಣಾಮವಾಗಿ ಜೋಧ್‌ಪುರ, ಹೈದರಬಾದ್, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಇತರೆ ನಗರಗಳ ಅಕ್ಷಯ ಪಾತ್ರೆ ಅಡುಗೆ ಮನೆಗಳು ಅಭಿವೃದ್ಧಿಗೊಳ್ಳಲಿವೆ.

ಜಗತ್ತಿನಲ್ಲೇ ಅತಿ ಹೆಚ್ಚು ಮಧ್ಯಾಹ್ನದ ಊಟ ನೀಡುತ್ತಿರುವ ಸರ್ಕಾರೇತರ ಸಂಸ್ಥೆ ಎಂಬ ಖ್ಯಾತಿ ಹೊಂದಿರುವ ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ಇವೆರಡು ಸಂಸ್ಥೆಗಳು ನಿರಂತರ ದಾನಿಗಳಾಗಿವೆ. ಆದರೆ ಈ ವಿಶೇಷ ನೆರವಿನ ಮೂಲಕ ಆಹಾರದ ಗುಣಮಟ್ಟ ವೃದ್ಧಿಗೆ ವಿಶೇಷ ಪ್ರಯೋಗಾಲಯ ಹಾಗೂ ಅಡುಗೆ ಮನೆ ನಿರ್ಮಾಣವಾಗಲಿದೆ. ಜೋಧ್‌ಪುರ, ಅಹ್ಮದಾಬಾದ್, ಹೈದರಾಬಾದ್, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ 22 ನಗರಗಲ್ಲಿ ಈ ಪ್ರಯೋಗಾಲಯಗಳು ಆರಂಭವಾಗಲಿದ್ದು, ಇದಕ್ಕೆ ಟಾಟಾ ಸಂಸ್ಥೆಯ ದೇಣಿಗೆ ಬಳಸಿಕೊಳ್ಳಲಾಗುತ್ತದೆ. ಪ್ರತಿ ಪ್ರಯೋಗಾಲಯಕ್ಕೂ ಸುಮಾರು 50 ಲಕ್ಷ ವ್ಯಯಿಸಲಾಗುತ್ತದೆ.

ಇನ್ಫೋಸಿಸ್ ನೀಡಿದ ಹಣದಲ್ಲಿ ಜೋಧ್‌ಪುರ ಹಾಗೂ ಹೈದರಾಬಾದ್‌ನಲ್ಲಿ ಹೈಟೆಕ್ ತಂತ್ರಜ್ಞಾನವುಳ್ಳ ಅಡುಗೆ ಮನೆ ಆರಂಭಗೊಳ್ಳಲಿದೆ. ರಾಜಸ್ತಾನದಲ್ಲಿ ಸುಮಾರು 1.50 ಲಕ್ಷ ಮಕ್ಕಳಿಗೆ ಕುಡಿಯುವ ನೀರನ್ನು ಪೂರೈಸುವ ಜವಾಬ್ದಾರಿ ಇನ್ಫೋಸಿಸ್ ಪ್ರತಿಷ್ಠಾನಕ್ಕಿದೆ. ಇದೇ ಮೊದಲ ಬಾರಿಗೆ ಟೆಟ್ರಾಪ್ಯಾಕ್ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದ್ದು, ಸ್ವೀಡನ್‌ನಿಂದ 6 ಬೃಹತ್ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಪ್ರತಿ 20 ನಿಮಿಷಕ್ಕೆ 7200 ಊಟಗಳನ್ನು ತಯಾರಿಸಿ ಪ್ಯಾಕ್ ಮಾಡಬಹುದು.

ಸುಧಾಮೂರ್ತಿ ಅವರೇ ಟಾಟಾ ಮುಖ್ಯಸ್ಥರಾಗಿದ್ದ ರತನ್ ಟಾಟಾ ಅವರಿಗೆ ಅಕ್ಷಯ ಪಾತ್ರೆಯ ಕೆಲಸಗಳನ್ನು ತೋರಿಸಿದ್ದರು. ಹೀಗಾಗಿ ಇಸ್ಕಾನ್‌ನ ಯೋಜನೆಗೆ ಈ ಮಟ್ಟದ ನೆರವು ದೊರೆತಿದೆ.

Write A Comment