ಕನ್ನಡ ವಾರ್ತೆಗಳು

ಎ ಗ್ರೇಡ್ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಹುಂಡಿಯನ್ನು 15 ದಿನಕ್ಕೊಮ್ಮೆ ತೆರೆಯಲು ಡಿಸಿ ಆದೇಶ.

Pinterest LinkedIn Tumblr

DC_ press_meet_1

ಮಂಗಳೂರು,ಜ.13: ದೇವಸ್ಥಾನಗಳಲ್ಲಿ ನಡೆಯುವ ಕಳ್ಳತನ ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸೂಚಿಸಿರುವ ಮಾರ್ಗದರ್ಶಿಯನ್ನು ಕಟ್ಟು ನಿಟ್ಟಿನಲ್ಲಿ ಜಾರಿಗೆ ತರುವಂತೆ ಹಾಗೂ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಎ ಗ್ರೇಡ್ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಹುಂಡಿಯನ್ನು ಪ್ರತಿ 15 ದಿನಗಳಿಗೊಮ್ಮೆ ತೆರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿನ ಬಂದೋಬಸ್ತ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಸೂಚನೆ ನೀಡಿದರು.

DC_ press_meet_2

ಈ ಹಿಂದೆ ಎ ಮತ್ತು ಬಿ ಕೆಟಗರಿಯ ದೇವಸ್ಥಾನಗಳಲ್ಲಿ ತಿಂಗಳಿಗೆ ಅಥವಾ ಎರಡು, ಮೂರು ತಿಂಗಳಿಗೊಮ್ಮೆ ಹುಂಡಿಯನ್ನು ತೆರೆಯಲಾಗುತ್ತಿತ್ತು. ಕೆಲವು ದೇವಸ್ಥಾನಗಳಲ್ಲಿ ಲಕ್ಷಾಂತರ ರೂ. ಹಣ, ಚಿನ್ನಾಭರಣಗಳು ಸಂಗ್ರಹವಾಗುತ್ತಿದ್ದು, ಅದನ್ನು ಅಷ್ಟು ದಿನಗಳ ವರೆಗೆ ಹುಂಡಿಯಲ್ಲೇ ಇಡುವುದು ಸುರಕ್ಷತೆ ದೃಷ್ಟಿಯಿಂದ ಅಪಾಯ. ಈ ಹಿನ್ನೆಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಇಲಾಖೆ ಅಧಿಕಾರಿಗಳೊಂದಿಗೆ ದೇವಸ್ಥಾನದ ಖಾತೆ ಇರುವ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ನಗದು ಹಾಗೂ ಇತರ ಸೊತ್ತುಗಳನ್ನು ಬ್ಯಾಂಕ್‌ನಲ್ಲಿ ಜಮಾ ಮಾಡುವುದು ಸೂಕ್ತ ಎಂದು ಅವರು ತಿಳಿಸಿದರು.

DC_ press_meet_3

ಸಿಸಿ ಟಿವಿ ಅಳವಡಿಕೆಗೆ ಸೂಚನೆ: ಕಳೆದ ಏಳು ತಿಂಗಳ ಹಿಂದೆ ದೇವಸ್ಥಾನಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆ ಬಗ್ಗೆ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಆದರೆ ಕೆಲವು ದೇವಸ್ಥಾನಗಳಲ್ಲಿ ಇನ್ನೂ ಈ ಸೂಚನೆಯ ಪಾಲನೆ ಆಗಿಲ್ಲ. ಕೆಲವು ದೇವಸ್ಥಾನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ಪೊಲೀಸರು ಸೂಚಿಸಿದ ಸ್ಥಳದಲ್ಲಿ ಕ್ಯಾಮರಾ ಅಳವಡಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಸ್.ಡಿ.ಶರಣಪ್ಪ ಸೂಚಿಸಿದರು.

ಕಟೀಲು ಕ್ಷೇತ್ರದಲ್ಲಿ ಶುಕ್ರವಾರ ಮತ್ತು ಭಾನುವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದಕ್ಕಾಗಿ ಈ ದಿನಗಳಲ್ಲಿ ಸಂಚಾರಿ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆ ಕಲ್ಪಿಸುವಂತೆ ದೇವಸ್ಥಾನದ ಅರ್ಚಕ ಹರಿನಾರಾಯಣ ಆಸ್ರಣ್ಣರು ಮನವಿ ಮಾಡಿದರು.

ಇದೇ ಸಂದರ್ಭ ಪಣೋಲಿಬೈಲಿನಲ್ಲಿ, ಮಂಗಳಾದೇವಿಯಲ್ಲೂ ಭಾನುವಾರ ಮತ್ತು ಶುಕ್ರವಾರ ಭಕ್ತರು ಸಾಕಷ್ಟು ಜನ ಸೇರುವುದರಿಂದ ವಾಹನ ದಟ್ಟನೆಯನ್ನು ನಿಭಾಯಿಸುವಂತೆ ದೇವಳಗಳ ಆಡಳಿತಾಧಿಕಾರಿಗಳು ಮನವಿ ಮಾಡಿಕೊಂಡರು. ದೇವಸ್ಥಾನಗಳಲ್ಲಿ ಬೆಂಕಿ ಅವಘಡವನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ವಯಂಚಾಲಿತ ಅಗ್ನಿನಿರೋಧಕ ಉಪಕರಣವನ್ನು ಅಳವಡಿಸುವಂತೆ ಎಸ್‌ಪಿ ಸೂಚನೆ ನೀಡಿದರು.

DC_ press_meet_4

ತಿಂಗಳೊಳಗೆ ಅನುಷ್ಠಾನಗೊಳಿಸಿ: ದೇವಸ್ಥಾನಗಳ ಭದ್ರತೆ ಕುರಿತಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಿದ ಮಾರ್ಗಸೂಚಿಯಂತೆ ಎಲ್ಲ ದೇವಸ್ಥಾನಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಕೆ, ಕಾವಲುಗಾರರ ನೇಮಕ, ಅಲರಾಂ ಅಳವಡಿಸುವುದು ಸೇರಿದಂತೆ ಎಲ್ಲ ರೀತಿಯ ಸುರಕ್ಷತಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಇಷ್ಟೆಲ್ಲಾ ಸಭೆ ನಡೆಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಅನಾಹುತಗಳಿಗೆ ಆಡಳಿತ ಮಂಡಳಿಯೇ ಜವಾಬ್ದಾರರಾಗುತ್ತಾರೆ. ಅದು ನಮ್ಮ ಪಾಲಿಗೆ ನಾಚಿಕೆಗೇಡಿನ ವಿಷಯವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಸೂಕ್ತ ನಿರ್ದೇಶನಗಳನ್ನು ಪಾಲಿಸುವಂತೆ ಎಸ್ಪಿ ತಿಳಿಸಿದರು.  ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಮಟ್ಟದ ಪೊಲೀಸ್ ಅಧಿಕಾರಿ ಪ್ರಮುಖ ದೇವಸ್ಥಾನಕ್ಕೆ ತೆರಳಿ ಮಾರ್ಗ ಸೂಚಿಗಳನ್ನು ಜಾರಿಗೆ ತರಲು ಸಲಹೆ ನೀಡಬೇಕು. ಭೇಟಿ ನೀಡಿ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಿ ಎಂದು ನಗರ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಧಾರ್ಮಿಕ ದತ್ತಿ ಇಲಾಖೆಯ ತಹಸೀಲ್ದಾರ್ ಪ್ರಭಾಕರ್, ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಮಂಗಳೂರು ನಗರದ ವಿವಿಧ ದೇವಸ್ಥಾನಗಳ ಆಡಳಿತಾಧಿಕಾರಿಗಳು, ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Write A Comment