ಕನ್ನಡ ವಾರ್ತೆಗಳು

ವಿದ್ಯಾರ್ಥಿ ವೇತನ ವಿತರಣೆ – ಯುವ ಜನಾಂಗ ದಾರಿ ತಪ್ಪುತ್ತಿರುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು : ಜಿಲ್ಲಾಧಿಕಾರಿ   

Pinterest LinkedIn Tumblr
Scolar_ship_distrubt
ಮಂಗಳೂರು, ಜ.12: ಉತ್ತಮ ಸಮಾಜವನ್ನು ಕಟ್ಟಬೇಕಾಗಿದ್ದ ಯುವ ಜನಾಂಗ ದಾರಿ ತಪ್ಪುತ್ತಿರುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಈ ಚಿತ್ರಣವನ್ನು ಬದಲಾಯಿಸುವ ಅಗತ್ಯವಿದೆ. ತಮ್ಮ ನಡೆನುಡಿಗಳ ಮೂಲಕ ಸಮಾಜದ ಇತರ ಬಾಂಧವರು ಬನ್ನಿ ಎಂದು ಪ್ರೀತಿಯಿಂದ ಕರೆಯುವ, ಭರವಸೆ ಮೂಡಿಸುವ, ವಿಶ್ವಾಸ ಭರಿಸುವ ವಾತಾವರಣವನ್ನು ರೂಪಿಸಬೇಕಾಗಿದೆ. ಯಾವ ಕಾರಣಕ್ಕೂ ಸಮುದಾಯ ತಲೆ ತಗ್ಗಿಸುವಂತಹ ಕಾರ್ಯಗಳನ್ನು ಮಾಡಬಾರದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಕರೆ ನೀಡಿದರು.
ರವಿವಾರ ನಗರದ ಲೊಯಲೊ ಸಭಾಂಗಣದಲ್ಲಿ ಕರ್ನಾಟಕ ಝಕಾತ್ ಚಾರಿಟೇಬಲ್ ಟ್ರಸ್ಟ್ ವತಿ ಯಿಂದ ನಡೆದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹೆಸರಿನಿಂದ ಯಾರೂ ಯಾರನ್ನೂ ತುಳಿಯಲು ಅಸಾಧ್ಯ. ಅಲ್ಲದೆ ಹೆಸರು ಕೇಳಿದಾಕ್ಷಣ ತಮ್ಮನ್ನು ಬದಿಗೆ ಸರಿಸುತ್ತಾರೆ ಎಂಬ ಭ್ರಮೆ ಬೇಡ. ಸಾಧಿಸುವ ಮೂಲಕ ಅರ್ಹತೆಯ ಆಧಾರದ ಮೇಲೆ ಸಮಾಜದ ಉನ್ನತ ಸ್ಥಾನಕ್ಕೇರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ ನ್ನಾಡಿದ ಝಕಾತ್ ಟ್ರಸ್ಟ್‌ನ ಅಧ್ಯಕ್ಷ ಖಲೀಲ್ ಅಹ್ಮದ್, ಇದು ಸಂಸ್ಥೆಯ 5ನೆ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ. ಕುಟುಂಬದ ವಾರ್ಷಿಕ ಆದಾಯ 16 ಸಾವಿರ ರೂ. ಮೀರದ ಬಡ ವಿದ್ಯಾರ್ಥಿಗಳಿಗೆ ಮಾತ್ರ ಇದನ್ನು ನೀಡಲಾಗುತ್ತಿದೆ. ಈ ಪೈಕಿ ಶೇ.70 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಮುಸ್ಲಿಮರಲ್ಲದೆ ಇತರ ಸಮಾಜದ ಅರ್ಹ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆಯ್ಕೆ ವಿಧಾನವು ಅತ್ಯಂತ ಪಾರದರ್ಶಕ ವಾಗಿರುತ್ತದೆ. ಕಳೆದ 2 ವರ್ಷಗಳಿಂದ ಝಕಾತ್ ಟ್ರಸ್ಟ್ ಸರಕಾರಿ ಯೋಜನೆ ಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿದೆ ಎಂದವರು ತಿಳಿಸಿದರು.
ವೇದಿಕೆಯಲ್ಲಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಶಾಂತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಶರೀಫ್, ಝಕಾತ್ ಟ್ರಸ್ಟ್ ನ ಟ್ರಸ್ಟಿಗಳಾದ ಅಲಂ ಠಾಕೋರ್, ವಹೀದಾ ಖಲೀಲ್, ಫಮೀದಾ ಉಪಸ್ಥಿತರಿದ್ದರು. ಬ್ಯಾರೀಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಪಾಲಾಕ್ಷಪ್ಪ ಶುಭ ಹಾರೈಸಿದರು. ಅಮೀನ್ ಮುದಸ್ಸರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಯಾಸೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.
ಪ್ರಸಕ್ತ ವರ್ಷ(2015) 13 ಜಿಲ್ಲೆಗಳ 5,200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 3.2 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ರವಿವಾರ ಸಮಾರಂಭದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 1,528 ವಿದ್ಯಾರ್ಥಿಗಳಿಗೆ 77 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ಕರ್ನಾಟಕ ಝಕಾತ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಖಲೀಲ್ ಅಹ್ಮದ್ ತಿಳಿಸಿದರು.
ವಿದ್ಯಾರ್ಥಿ ವೇತನದ ಪ್ರಯೋಜನ ಪಡೆದು ಸಾಧನೆ ಮಾಡಿ : ಡಿಸಿ
ಗಡಿನಾಡಿನ ಅತ್ಯಂತ ಕುಗ್ರಾಮದಲ್ಲಿ ಹುಟ್ಟಿ ರಸ್ತೆ ಸಂಪರ್ಕವೂ ಇಲ್ಲದ ದೋಣಿ ಮೂಲಕ ನದಿ ದಾಟಿ ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ ಕಲಿತ ನಾನು ಪರಿಶ್ರಮದಿಂದ ಇದೀಗ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಆ ಕಾಲಕ್ಕೆ ಯಾವ ಆಧುನಿಕ ಸೌಲಭ್ಯಗಳೂ ಇರಲಿಲ್ಲ. ಇಂದು ಹಾಗಲ್ಲ, ಸಕಲ ಆಧುನಿಕ ಸೌಕರ್ಯಗಳಲ್ಲದೆ ಸಮಾಜಮುಖಿ ಯಾಗಿರುವ ಇಂತಹ ಸಂಸ್ಥೆಗಳ ವಿದ್ಯಾರ್ಥಿವೇತನ ಸಿಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉನ್ನತ ಸ್ಥಾನಕ್ಕೇರಬೇಕು. ಸರಕಾರಿ ಹುದ್ದೆಗಳನ್ನು ಪಡೆಯುವ ಮೂಲಕ ಆಡಳಿತದ ಒಂದು ಭಾಗವಾಗಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಕಾರ್ಯಕ್ರಮದ ಬಳಿಕ ಸುದ್ಧಿಗಾರರಲ್ಲಿ ಹೇಳಿದರು.

Write A Comment