ಬಜಪೆ: ನಸುಕಿನಲ್ಲಿ ಉಗ್ರನ ಸೆರೆ : ದುಬೈಗೆ ಪರಾರಿಯಾಗಲಿದ್ದ ರಿಯಾಜ್
ಮಂಗಳೂರು, ಜ.11 : ಹೈದರಾಬಾದ್, ಚೆನ್ನೈ ಸೇರಿ ದೇಶದ ಇತರೆಡೆ ನಡೆದ ಸ್ಪೋಟ ಪ್ರಕರಣಗಳಿಗೆ ಸಂಭಂದಿಸಿದಂತೆ ಮತ್ತೊಬ್ಬ ಶಂಕಿತ ಉಗ್ರ ಮಹಮದ್ ರಿಯಾಜ್‌ನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಮಂಗಳೂರಿನ ಸಿಸಿಬಿ ಪೊಲೀಸರ ಸಹಕಾರದಲ್ಲಿ ಬಂಧಿಸಿದ್ದಾರೆ.
ಉಗ್ರರ ಬೇಟೆಯನ್ನು ಮುಂದುವರಿಸಿರುವ ಬೆಂಗಳೂರಿನ ಸಿಸಿಬಿ ತಂಡವು ಇಂದು ಮುಂಜಾನೆ ಮಂಗಳೂರಿನ ಅಂತಾರಾಷ್ಟ್ರೀಯ ಬಜಪೆ ವಿಮಾನ ನಿಲ್ದಾಣದಲ್ಲಿ ನಿಷೇಧಿತ ಇಂಡಿಯನ್ ಮುಜಾಯುದ್ದೀನ್ ಸಂಘಟನೆಯ ಭಟ್ಕಳ ಮೂಲದ ಶಂಕಿತ ಉಗ್ರ ಮಹಮದ್ ರಿಯಾಜ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಂಕಿತ ಉಗ್ರನನ್ನು ಭಟ್ಕಳದ ಮಕ್‌ದೂಮ್ ಕಾಲೋನಿಯ ನಿವಾಸಿ ರಿಯಾಜ್ ಅಹಮದ್ ಸಯೀದ್ (28) ಎಂದು ಗುರತಿಸಲಾಗಿದ್ದು, ಈತ ತಡರಾತ್ರಿ 11.30ರ ಜೆಟ್ ಏರ್‌ವೈಸ್ ಮೂಲಕ ದುಬೈಗೆ ಹಾರಲಿದ್ದನು ಎನ್ನಲಾಗಿದೆ. ಈ ಬಗ್ಗೆ ಪೂರ್ವ ಮಾಹಿತಿ ಪಡೆದಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರು ಸಯೀದ್‌ನು ಬೋರ್ಡಿಂಗ್ ಮುಗಿಸಿ ಇನ್ನೇನು ವಿಮಾನದತ್ತ ಸಾಗುತ್ತಿದ್ದಾಗಲೆ ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳು ತಿಳಿಸಿದಂತೆ ಶಂಕಿತ ಉಗ್ರ ರಿಯಾಜ್ ದೇಶದ ವಿವಿಧೆಡೆ ನಡೆದ ಸ್ಪೋಟದ ಪ್ರಕರಣದಲ್ಲಿ ಶಾಮೀಲಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಪೋಟದಲ್ಲಿ ಮಹಿಳೆಯೋರ್ವರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು. ಈಗಾಗಲೇ ಜನವರಿ ೮ರಂದು ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರು ರಿಯಾಜ್‌ನ ಬಗ್ಗೆ ಮಾಹಿತಿ ನೀಡಿ ಆತ ದುಬೈಗೆ ತೆರಳಲಿರುವ ಬಗ್ಗೆ ವಿಷಯ ತಿಳಿಸಿದ್ದರಿಂದ ಮಂಗಳೂರಿನ ಸಿಸಿಬಿ ಪೊಲೀಸ್ ತಂಡದ ಸಹಕಾರದಲ್ಲಿ ಈ ಮಹತ್ವದ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ತಿಳಿದು ಬಂದಿದೆ.
ಬೆಂಗಳೂರಿನ ಸಿಸಿಬಿ ತಂಡವು ಜನವರಿ ೮ರಂದು ಬಂಧಿಸಿರುವ ಸಯೀದ್ ಇಸ್ಮಾಯಿಲ್ ಆಫಕ್ (34), ಅಬ್ದುಸ್ ಸಬೂರ್(23) ಹಾಗೂ ಸದ್ದಾಂ ಹುಸೈನ್ (35)ರನ್ನು ಬಂಧಿಸಿದ್ದು ಇವರೆಲ್ಲಾ ಭಟ್ಕಳ ಮೂಲದವರಾಗಿದ್ದು ರಿಯಾಜ್ ಅಹ್ಮದ್ ಶಯೀದ್ ಸಹ ಇವರ ಸಹವರ್ತಿಯಾಗಿದ್ದಾನೆ ಜೊತೆಗೆ ಇನ್ನಿತರರು ಇವರೊಂದಿಗೆ ಶಾಮಿಲಾಗಿರಬಹುದು ಎಂಬ ಮಾಹಿತಿ ದೊರೆತಿದ್ದು ವಿಧ್ವಂಸಕ ಕೃತ್ಯವನ್ನು ಯಾರ ಪ್ರಚೋದನೆಯಿಂದ ಹಾಗೂ ಇವರೊಂದಿಗೆ ಇರುವ ಇನ್ನಿತರರು ಯಾರು ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ.
ಬಂಧಿತ ರಿಯಾಜ್ ಅಹ್ಮದ್ ಸಯೀದ್‌ನನ್ನು ಹೆಚ್ಚಿನ ತನಿಖೆಗಾಗಿ ರಸ್ತೆಯ ಮೂಲಕ ಬೆಂಗಳೂರಿಗೆ ಕರೆದೊಯ್ದಿದ್ದು. ಮಂಗಳೂರಿನ ಸಿಸಿಬಿ ತಂಡವು ಸಯೀದ್ ಭಟ್ಕಳದಿಂದ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಮೂಲಕ ಬಂದಿದ್ದನು ಹಾಗೂ ಹೇಗೆ ಬಂದಿದ್ದನು ಎಂಬ ಮಾಹಿತಿಯನ್ನು ಸಿಸಿ ಕ್ಯಾಮರಾದ ದಾಖಲೆಯನ್ನು ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮಂಗಳೂರಿನ ಪೊಲೀಸ್ ಮೂಲಗಳು ತಿಳಿಸಿದೆ.
ಶಂಕಿತ ಉಗ್ರ ರಿಯಾಜ್ ನೆಲೆಸಿದ್ದ ಭಟ್ಕಳದ ಮನೆಯಲ್ಲಿ ಬಾಂಬ್ ತಯಾರಿಕೆಯ ವಸ್ತುಗಳು, ಇತರ ಕಾಗದ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ.
ನಗರಕ್ಕೆ ಕರೆತಂದಿರುವ ರಿಯಾಜ್‌ನನ್ನು ಮಡಿವಾಳದ ವಿಶೇಷ ತನಿಖಾ ಘಟಕದಲ್ಲಿ ವಿಚಾರಣೆಗೊಳಪಡಿಸಲಾಗುತ್ತಿದೆ. ಬಂಧಿತ ಸೈಯದ್ ಇಸ್ಮಾಯಿಲ್, ಅಬ್ದುಲ್ ಸಬೂರ್ ಹಾಗೂ ಸದ್ದಾಂ ಹುಸೇನ್‌ನೊಂದಿಗೆ ರಿಯಾಜ್‌ನ ಸಂಬಂಧ ಐಎಂ ಸಂಘಟನೆಯ ಜತೆಗೆ ಹೊಂದಿರುವ ನಂಟಿನ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.
ಶಂಕಿತ ಉಗ್ರ ರಿಯಾಜ್ ಬಳಿ ದೊರೆತಿರುವ ವಸ್ತುಗಳ ಪರಿಶೀಲನೆ ನಡೆಸಲಾಗುತ್ತಿದೆ. ಆತನ ಉಗ್ರಗಾಮಿ ಚಟುವಟಿಕೆಗಳ ತನಿಖೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ರೆಡ್ಡಿ ಹೇಳಿದರು.
ಈ ನಡುವೆ ಇತ್ತೀಚೆಗೆ ಬಂಧಿಸಿರುವ ಶಂಕಿತ ಉಗ್ರರು ಹೈದರಾಬಾದ್, ಚೆನ್ನೈ, ಉತ್ತರಪ್ರದೇಶದಲ್ಲಿ ನಡೆದ ಬಾಂಬ್‌ಸ್ಫೋಟ ಪ್ರಕರಣಗಳಲ್ಲಿ ತಮ್ಮ ಪಾತ್ರವಿರುವುದನ್ನು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇಸ್ಮಾಯಿಲ್ ಅಫಕ್ ಪಾಕಿಸ್ತಾನಕ್ಕೆ ಅಗಾಗ್ಗೆ ಹೋಗಿ ಬರುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ನಗರದ ಚರ್ಚ್‌ಸ್ಟ್ರೀಟ್‌ನ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಬಂಧಿತ ನಾಲ್ವರು ಉಗ್ರರ ಪಾತ್ರವಿರುವ ಬಗ್ಗೆ ಇನ್ನು ಯಾವುದೇ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದರು.
ಐಎಂ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿ ಬಾಂಬ್ ದಾಳಿ ನಡೆಸುವ ಗುರಿ ಹೊಂದಿದ್ದು, ಇವರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದರು.
ಬಂಧಿತರಿಂದ ವಶಪಡಿಸಿಕೊಂಡಿರುವ ಡಿಟೋನೇಟರ್, ಟೈಮರ್, ಇನ್ನಿತರ ಬಾಂಬ್ ತಯಾರಿಕೆಯ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು.

