ಕನ್ನಡ ವಾರ್ತೆಗಳು

ಕಲಿಯುಗದಲ್ಲಿ ಪ್ರಮಾಣಿಕತೆ ಮೆರೆದ ಯುವಕರು

Pinterest LinkedIn Tumblr

Suresh_Nayak_agnls

ಮಂಗಳೂರು,ಡಿ.26 : ಶುಕ್ರವಾರದಂದು ನಿವೃತ್ತ ಹಿರಿಯ ನಾಗರಿಕರಾದ ಪಾಂಗಾಳ ಸುರೇಶ್ ನಾಯಕ್ ತಮ್ಮ ಪತ್ನಿ ಸಮೀನ ಜತೆ ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ್ದರು. ಆದರೆ ದಾರಿ ನಡುವೆ ಅವರ ಕಾರಿನ ಆರ್‌ಸಿ (ರೆಜಿಸ್ಟ್ರೇಷನ್ ಸರ್ಟಿಫಿಕೇಟ್) ಕಳೆದು ಹೋಯಿತು. ಅದನ್ನು ಹುಡುಕುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾದವು. ಈ ವಿಚಾರವಾಗಿ ಅವರು ಚಿಂತೆಯಲ್ಲಿದ್ದಾಗ, ಮರುದಿನ ಅಂದರೆ ಡಿಸೆಂಬರ್ 13 , ಶನಿವಾರ ಅಶ್ವಥ್ ಮತ್ತು ವಿನೋದ್ ಹೆಸರಿನ ಇಬ್ಬರು ಯುವಕರು ಅವರ ಮನೆಗೆ ಬಂದರು. ದಂಪತಿಗಳ ಅತ್ಯಾಶ್ಚರ್ಯಕ್ಕೆ ಅವರ ಕಳೆದುಹೋದ ಆರ್‌ಸಿಯನ್ನು ಅವರ ಕೈಗಿತ್ತರು!

ಈ ಯುವಕರು ಆರ್‌ಸಿಯನ್ನು ಆರ್‌ಟಿ‌ಒ ಕಚೇರಿಯ ಪಕ್ಕದಲ್ಲಿ ಬಿದ್ದಿರುವುದನ್ನು ನೋಡಿ ಅದನ್ನು ಕೈಗೆತ್ತಿಕೊಂಡಿದ್ದರು. ಯಾರೋ ಈ ಆರ್‌ಸಿಯನ್ನು ಕಳೆದುಕೊಂಡಿದ್ದಾರೆಂದು ತಿಳಿದು ಅದರ ವಾರಸುದಾರರನ್ನು ಪತ್ತೆಹಚ್ಚಲು ಬಹಳ ಶ್ರಮಿಸಿದ್ದರು. ಆರ್‌ಸಿಯಲ್ಲಿ ಮನೆಯ ವಿಳಾಸವನ್ನು ನಮೂದಿಸಿದ್ದರೂ ಅದನ್ನು ಪತ್ತೆಹಚ್ಚುವ ಕಾರ್ಯ ಬಹಳ ತ್ರಾಸದಾಯಕವಾಗಿತ್ತು. ಆದರೂ ಈ ಆಪತ್ಬಾಂಧವರು ತಮ್ಮ ಪ್ರಯತ್ನವನ್ನು ಕೈಬಿಡದೆ ಕೊನೆಗೂ ಮನೆಯನ್ನು ಪತ್ತೆಹಚ್ಚುವಲ್ಲಿ ಸಫಲರಾದರು.

ಆರ್‌ಸಿಯನ್ನು ತಮಗೆ ಮರಳಿಸಿದ ಯುವಕರಿಗೆ ನಾಯಕ್ ದಂಪತಿಗಳು ಮನ:ಪೂರ್ವಕವಾಗಿ ಕೃತಜ್ಞತೆ ಹೇಳಿ ಅವರ ಕಾರ್ಯವನ್ನು ಕೊಂಡಾಡಿದರು. “ಭ್ರಷ್ಟಾಚಾರ ಮತ್ತು ವಂಚನೆ ಹಾಸುಹೊಕ್ಕಾಗಿರುವ ಈಗಿನ ಸಮಾಜದಲ್ಲಿ ಇಂತಹ ಚಾರಿತ್ರ್ಯವಂತ, ಪ್ರಾಮಾಣಿಕ ಯುವಕರು ತಮ್ಮಂತಹ ಇತರ ಯುವಕರಿಗೆ ಮತ್ತು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ,” ಎಂದು ಕಳೆದು ಹೋದ ಆರ್‌ಸಿ ಮರಳಿ ಸಿಕ್ಕ ಸಂತಸದಲ್ಲಿ ಸುರೇಶ್ ನಾಯಕ್ ಹೇಳಿದರು.

Write A Comment