ಕನ್ನಡ ವಾರ್ತೆಗಳು

ಅಟಲ್‌ಬಿಹಾರಿ ವಾಜಪೇಯಿ ಹಾಗೂ ಮದನಮೋಹನ ಮಾಳವೀಯರಿಗೆ ಭಾರತ ರತ್ನ ಪ್ರಶಸ್ತಿ :ಜಿಲ್ಲಾ ಬಿಜೆಪಿ ಹರ್ಷ

Pinterest LinkedIn Tumblr

Vajpayee_and_Malavi_

ಮಂಗಳೂರು,ಡಿ.24: ದೇಶ ಕಂಡ ಮಹಾನ್ ನಾಯಕ, ರಾಜಕೀಯ ರಂಗದ ಅಜಾತಶತ್ರು ಸನ್ಮಾನ್ಯ ಅಟಲ್‌ಬಿಹಾರಿ ವಾಜಪೇಯಿ ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರ, ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಸ್ವರ್ಗೀಯ ಶ್ರೀ ಮದನಮೋಹನ ಮಾಳವೀಯರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿರುವುದಕ್ಕೆ ಬಿಜೆಪಿ ದ.ಕ.ಜಿಲ್ಲಾ ಸಮಿತಿ ತೀವ್ರ ಸಂತಸವನ್ನು ವ್ಯಕ್ತ ಪಡಿಸಿದೆ.

ಸುಮಾರು ೪೦ ವರ್ಷಗಳ ಕಾಲ ಸಂಸದರಾಗಿದ್ದು, ಮೌಲ್ಯಾಧಾರಿತ ರಾಜಕಾರಣಕ್ಕೆ ಆದರ್ಶರಾದ ದೇಶದ ಪ್ರಧಾನ ಮಂತ್ರಿಯಾಗಿ ಅನೇಕ ಜನಸ್ನೇಹಿ ಯೋಜನೆಗಳನ್ನು ತಂದ ಕವಿಹೃದಯದ, ಪತ್ರಕರ್ತ, ವಾಗ್ಮಿ ಶ್ರೀ ಅಟಲ್‌ಬಿಹಾರಿ ವಾಜಪೇಯಿಯವರಿಗೆ ಅವರ ಜನ್ಮದಿನ ಮತ್ತು ‘ಉತ್ತಮ ಆಡಳಿತ ದಿನ’ದಂದೇ ಪ್ರಶಸ್ತಿ ಪ್ರಧಾನ ನಿರ್ಧಾರ ಪ್ರಕಟವಾಗಿರುವುದು ಅರ್ಹವಾಗಿಯೇ ಅವರಿಗೆ ಸಂದ ಗೌರವ.

ಸ್ವರ್ಗೀಯ ಶ್ರೀ ಮದನಮೋಹನ ಮಾಳವೀಯರು ದೇಶದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವಲ್ಲಿ ಯಶಸ್ಸು ಕಂಡಿದ್ದ ಸ್ವಾತಂತ್ರ್ಯ ಹೋರಾಟಗಾರ. ಸ್ವಾತಂತ್ರ್ಯ ಪೂರ್ವದಲ್ಲಿ ೨ ಬಾರಿ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷರಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಥಾಪಕರಾಗಿದ್ದು ೨೦ ವರ್ಷಗಳ ಕಾಲ ಉಪಕುಲಪತಿಗಳಾಗಿ ಸೇವೆಸಲ್ಲಿಸಿದ್ದ ಮಾಳವೀಯರು ಶಿಕ್ಷಣ ತಜ್ಞರಾಗಿದ್ದರು.

ಉಭಯ ಗಣ್ಯರು ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾಗುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಾಗಿದೆ. ಅರ್ಹರಿಗೆ ಸಂದ ಅತ್ಯುನ್ನತ ಪ್ರಶಸ್ತಿಗೆ ದ.ಕ.ಜಿಲ್ಲಾ ಬಿಜೆಪಿ ಸಮಿತಿಯು ಕೇಂದ್ರ ಸರಕಾರವನ್ನು ಅಭಿನಂದಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಪ್ರತಾಪಸಿಂಹ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.

Write A Comment