ಕನ್ನಡ ವಾರ್ತೆಗಳು

ಚಿರತೆ ದಾಳಿ; ಪ್ರತ್ಯೇಕ ಪ್ರಕರಣದಲ್ಲಿ ಎರಡು ಹಸು ಬಲಿ

Pinterest LinkedIn Tumblr

cheeta

ಕುಂದಾಪುರ:ತಾಲೂಕಿನ ಎರಡು ಕಡೆ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಚಿರತೆದಾಳಿಗೊಳಗಾಗಿ ಎರಡು ಹಸುಗಳು ಬಲಿಯಾದ ಘಟನೆ ಸೋಮವಾರ ತಡರಾತ್ರಿ ವರದಿಯಾಗಿದೆ.

ಅಸೋಡು ಬಸುರಿ ಹಸು ಬಲಿ: ತಾಲೂಕಿನ ಆಸೋಡು ಗ್ರಾಮದ ಕುರುವಡಿ ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಕಾಟ ಕಂಡು ಬಂದಿದ್ದು, ಸೋಮವಾರ ರಾತ್ರಿ ಒಂದು ಬಸುರಿ ದನ ಬಲಿಯಾಗಿದೆ.

ಅಸೋಡು ಗ್ರಾಮದ ಕುರುವಡಿಯ ಸೂರ ಪೂಜಾರಿ ಅವರ ದನವನ್ನು ಚಿರತೆ ತಿಂದು ಹಾಕಿದ್ದು, ಅದರ ಅವಶೇಷ ಪರಿಸರದಲ್ಲಿ ಪತ್ತೆಯಾಗಿದೆ. ಕಳೆದ ವಾರ ಇದೇ ಪರಿಸರದಲ್ಲಿ ಚಿರತೆ ದನವನ್ನು ತಿಂದು ಹಾಕಿತ್ತು. ಈ ಪರಿಸರದ ಜನರು ನಿರಂತರ ಚಿರತೆ ಕಾಟದಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಲಾಗಿದೆ.

ಚಿರತೆ ಕಾಟ:  ಕಳೆದ ಹಲವು ದಿನಗಳಿಂದ ಚಿರತೆ ಈ ಭಾಗದಲ್ಲಿ ತಿರುಗಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಕೆಲವರು ಚಿರತೆಯನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ ಎನ್ನಲಾಗಿದೆ. ಕಳೆದ ವಾರ ಅರಣ್ಯ ಇಲಾಖೆ ಸಿಬಂದಿಗಳೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಚಿರತೆ ಹಿಡಿಯಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಪ್ರದೇಶದಲ್ಲಿ ಜನರು ತಿರುಗಾಡಲು ಹೆದರುತ್ತಿದ್ದು, ಸಂಬಂಧಪಟ್ಟ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.

ಕೊಲ್ಲೂರು ಸಮೀಪದ ಜಡ್ಕಲ್ನಲ್ಲಿ ಚಿರತೆ:

ತಾಲೂಕಿನ ಜಡ್ಕಲ್ ಗ್ರಾಮದ ಸೆಳ್ಕೋಡು ಜಂಬ್ರಾಡಿ ಎಂಬಲ್ಲಿ ಹಸು ಚಿರತೆ ದಾಳಿಗೆ ಹಸು ಬಲಿಯಾಗಿದೆ.

ಸೋಮವಾರ ರಾತ್ರಿ ಜಂಬ್ರಾಡಿ ಹುಲಿಪಾರೆ ಸಮೀಪದ ದೇವೇಂದ್ರ ಪೂಜಾರಿ ಎಂಬವರ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ 2 ವರ್ಷ ಪ್ರಾಯದ ಹಸುವಿನ ಮೇಲೆ ಎರಗಿ ಸರಿ ಸುಮಾರು 200ಮೀ. ಅಂತರದಲ್ಲಿರುವ ಕಾಡಿಗೆ ಏಳೆದುಕೊಂಡು ಸಾಗಿ ಅರೆಬರೆ ತಿಂದು ಮುಗಿಸಿದೆ.

ಮನೆಯವರ ಕೂಗಾಟಕ್ಕೆ ಜಗ್ಗದ ಚಿರತೆ ಅಂತಿಮವಾಗಿ ಹಸುವನ್ನು ಬಿಟ್ಟು ತೊಲಗಿದೆ. ಮಂಗಳವಾರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಚಿರತೆಗಾಗಿ ಬಲೆ ಬೀಸಿದ್ದಾರೆ. ಭಾರಿ ಗಾತ್ರದ ಚಿರತೆ ಭಯಾನಕವಾಗಿದ್ದು ಭಯಬೀಳಿಸುವಂತಿದೆ ಎಂದು ಪ್ರತ್ಯಕ್ಷದರ್ಶಿ ದೇವೇಂದ್ರ ಪೂಜಾರಿ ತಿಳಿಸಿದ್ದಾರೆ.

Write A Comment