ಕನ್ನಡ ವಾರ್ತೆಗಳು

ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ಬೆಳೆಯುವ ಅವಕಾಶ ಆಮ್ ಆದ್ಮಿ ಪಕ್ಷಕ್ಕಿದೆ : ರವಿಕೃಷ್ಣ ರೆಡ್ಡಿ

Pinterest LinkedIn Tumblr

a_a_p_meet1

ಮಂಗಳೂರು, ಡಿ.16: ನೈತಿಕ ಪೊಲೀಸ್‌ಗಿರಿ ಜಿಲ್ಲೆಗೆ ಕೆಟ್ಟ ಹೆಸರು ತರುತ್ತಿದೆ. ಇದನ್ನು ಮಟ್ಟ ಹಾಕಲು ಸರಕಾರ ವಿಫಲವಾಗಿದೆ. ಬಿಜೆಪಿ ಆಡಳಿತದಲ್ಲಿರುವಾಗ ನಡೆಯುತ್ತಿದ್ದ ಕೋಮುವಾದ ಕಾಂಗ್ರೆಸ್ ಆಡಳಿತದಲ್ಲೂ ಮುಂದುವರಿದಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರ ರವಿಕೃಷ್ಣ ರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಎಂಬುದು ಸಾಬೀತಾಗಿದೆ. ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ಬೆಳೆಯುವ ಅವಕಾಶ ಆಮ್ ಆದ್ಮಿ ಪಕ್ಷಕ್ಕಿದೆ ಎಂದರು. ದ.ಕ ಜಿಲ್ಲೆ ಕೋಮುವಾದದ ಪ್ರಯೋಗ ಶಾಲೆಯಂತಾಗಿದೆ. ಸಣ್ಣಪುಟ್ಟ ವಿಚಾರಗಳಿಗೂ ಕೋಮು ಬಣ್ಣ ಕಟ್ಟಿ ಸಂಘರ್ಷಗಳು ನಡೆಯುತ್ತಿದ್ದು, ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದವರು ಆರೋಪಿಸಿದರು.

a_a_p_meet2

ಪಕ್ಷದ ಪ್ರಮುಖರಾದ ಡಾ.ಮರ್ಸಿಯ ಪಿಂಟೋ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಮಾನದಂಡವಿಲ್ಲದೆ ಹಾಗೂ ಜನ ಸಾಮಾನ್ಯರಿಗೆ ನಡೆದಾಡಲು ಅನುಕೂಪವಾಗಲು ಫುಟ್‌ಪಾತ್ ವ್ಯವಸ್ಥೆ ಇಲ್ಲದೆ ಮುಖ್ಯಮಂತ್ರಿ ಅನುದಾನದಲ್ಲಿ ಕಾಂಕ್ರೀಟೀಕರಣ ನಡೆದಿದೆ ಎಂದರು.

ಪಕ್ಷದ ಮಿಷನ್ ವಿಸ್ತಾರ್ ಕಾರ್ಯಕ್ರಮದ ಅನ್ವಯ ದೇಶಾದ್ಯಂತ ಸ್ವತಂತ್ರ ವೀಕ್ಷಕರು ಅಧ್ಯಯನ ನಡೆಸಿ ಪಕ್ಷದ ಬಲವರ್ಧನೆಗೆ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಅಜಿತ್ ಜಾಯ್ ಸ್ವತಂತ್ರ ವೀಕ್ಷಕರಾಗಿ ಸಂದರ್ಶನ ನಡೆಸಿರುವ ಹಿನ್ನೆಲೆಯಲ್ಲಿ ಅತಿ ಶೀಘ್ರ ಹೊಸ ಸಮಿತಿ ರಚನೆಯಾಗಲಿದೆ ಎಂದರು. ಪಕ್ಷದ ಪ್ರಮುಖರಾದ ಡಾ.ಮರ್ಸಿಯ ಪಿಂಟೊ, ಅಲೆಕ್ಸಾಂಡರ್ ಡಿಸೋಜ, ರೋಹನ್ ಸಿರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment