ಕನ್ನಡ ವಾರ್ತೆಗಳು

ಉಳಾಯಿಬೆಟ್ಟು ಪ್ರಕರಣ |ಎಲ್ಲೆಡೆ ಕಟ್ಟೆಚ್ಚರ| ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಹಲವಾರ ಬಂಧನ | ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ

Pinterest LinkedIn Tumblr

Ulaibettu_Case_Control

ಮಂಗಳೂರು: ಕಳೆದ ಆರು ದಿನಗಳಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಂಡು ಬಂದಿದ್ದ ಪ್ರಕ್ಷುಬ್ದ ಪರಿಸ್ಥಿತಿ ಬುಧವಾರ ತಿಳಿಯಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬುಧವಾರ 9 ಮಂದಿಯನ್ನು ಬಂಧಿಸಲಾಗಿದ್ದು, ಇದುವರೆಗೆ ಒಟ್ಟು ಬಂಧಿತರ ಸಂಖ್ಯೆ 49ಕ್ಕೇರಿದೆ.

ಕಾವೂರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಸೋಮವಾರ ಬಂದ್ ಆಚರಣೆ ಸಂದರ್ಭ ಪರಾರಿ ಉಳಾಯಿಬೆಟ್ಟು ದ್ವಾರದ ಸಮೀಪ ನಡೆದಿದ್ದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರತಿಭಟನೆಯ ವಿಡಿಯೋ ಕ್ಲಿಪ್ಪಿಂಗ್ಸ್ ಪರಿಶೀಲಿಸಿ ಯಾರುಯಾರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಗುರುತಿಸಿ ಪೊಲೀಸರು ಅವರನ್ನು ಬಂಧಿಸುತ್ತಿದ್ದಾರೆ.

ಬುಧವಾರ ಅಲ್ಲಲ್ಲಿ ಸಣ್ಣಪುಟ್ಟ ಚಕಮಕಿ ನಡೆದಿರುವುದು ಬಿಟ್ಟರೆ ಎಲ್ಲೆಡೆ ಶಾಂತಿ ನೆಲೆಸಿತ್ತು. ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿ ಸಾರ್ವಜನಿಕರು ಗುಂಪು ಸೇರದಂತೆ ಎಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ನಡೆಯಲಿಲ್ಲ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಲಾತ್ಕಾರವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಜನರನ್ನು ಚದುರಿಸಿದ್ದು, ಬುಧವಾರ ಕೂಡ ರಾತ್ರಿ ಸೂಕ್ಷ್ಮ ಪ್ರದೇಶಗಳಲ್ಲಿನ ಅಂಗಡಿಗಳನ್ನು ಬೇಗನೆ ಬಂದ್ ಮಾಡಿಸುವಂತೆ ಸೂಚನೆ ನೀಡಲಾಗಿತ್ತು.

ಮಂಡ್ಯ ಹೆಚ್ಚುವರಿ ಎಸ್‌ಪಿ, ಈ ಹಿಂದೆ ಪಣಂಬೂರು ಉಪ ವಿಭಾಗದಲ್ಲಿ ಎಸಿಪಿ ಆಗಿದ್ದ ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ಸುರತ್ಕಲ್, ಕೃಷ್ಣಾಪುರ, ಚೊಕ್ಕಬೆಟ್ಟು ಪರಿಸರದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೃಷ್ಣಾಪುರ, ಚೊಕ್ಕಬೆಟ್ಟು ಪರಿಸರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ಗಲಭೆಗೆ ಮೂಲ ಕಾರಣವಾಗಿದ್ದ ಉಳಾಯಿಬೆಟ್ಟು ಪರಿಸರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಗ್ರಾಮಾಂತರ ಇನ್‌ಸ್ಪೆಕ್ಟರ್ ಆಗಿದ್ದ ರಾಜೇಶ್ ಅವರನ್ನು ಕಮಿಷನರ್ ಕಚೇರಿಯ ವಿಶೇಷ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಗ್ರಾಮಾಂತರ ಠಾಣೆಗೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈ ಹಿಂದೆ ಉಳ್ಳಾಲ, ಪಣಂಬೂರು, ಬಜಪೆ ಪ್ರದೇಶಗಳಲ್ಲಿ ನಡೆದಿದ್ದ ಗಲಭೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ಹೆಗ್ಗಳಿಕೆ ಪಡೆದಿರುವ ಪ್ರಮೋದ್ ಅವರಿಗೆ ಇದೀಗ ಸೂಕ್ಷ್ಮ ಪ್ರದೇಶವಾಗಿರುವ ಗ್ರಾಮಾಂತರ ಠಾಣೆಯ ಹೊಣೆ ವಹಿಸಲಾಗಿದೆ.

ನಗರಕ್ಕೆ ಹೊರ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಪೊಲೀಸರನ್ನು ಹಾಗೂ ಹಿರಿಯ ಅಧಿಕಾರಿಗಳನ್ನು ಕರೆಸಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಬುಧವಾರ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಸುರತ್ಕಲ್‌ನಲ್ಲಿ ಶಾಂತಿ ಸಭೆ: ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಬುಧವಾರ ಸಂಜೆ ಪಣಂಬೂರು ಎಸಿಪಿ ರವಿ ಕುಮಾರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ಇನ್‌ಸ್ಪೆಕ್ಟರ್ ನಟರಾಜ್, ಎಸ್‌ಐಗಳಾದ ಕುಮಾರೇಶ್, ರವಿಶಂಕರ್, ಟ್ರಾಫಿಕ್ ಎಸ್‌ಐ ಗೋಪಾಲಕೃಷ್ಣ ಭಟ್, ಕಾರ್ಪೊರೇಟರ್‌ಗಳಾದ ಗಣೇಶ್ ಹೊಸಬೆಟ್ಟು, ತಿಲಕ್‌ರಾಜ್, ಗುಣಕರ ಶೆಟ್ಟಿ, ಮುಖಂಡರಾದ ಶೋಬೇಂದ್ರ ಸಸಿಹಿತ್ಲು, ಯೋಗೀಶ್ ಸನಿಲ್ ಕುಳಾಯಿ, ವೇದಮೂರ್ತಿ ಐ.ರಮಾನಂದ ಭಟ್, ಮಸೀದಿಗಳ ಧರ್ಮಗುರುಗಳು, ಚರ್ಚ್‌ನ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಿದ್ದರು. ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾರ್ಪೊರೇಟರ್‌ತಿಲಕ್‌ರಾಜ್ ಮಾತನಾಡಿ, ಸೋಮವಾರ ವಿನಯ್ ಕುಮಾರ್‌ಗೆ ಹಲ್ಲೆ ನಡೆದಾಗ ನಾವ್ಯಾರು ರಸ್ತೆಯಲ್ಲಿ ಗುಂಪು ಸೇರಿ ಭಯದ ವಾತಾವರಣ ಉಂಟು ಮಾಡಲಿಲ್ಲ. ಆದರೆ ಮಂಗಳವಾರ ರಾತ್ರಿ ತಸ್ಲೀಂ ಆರೀಫ್ ಮೇಲೆ ಹಲ್ಲೆ ನಡೆದಾಗ ಸಾವಿರಾರು ಮಂದಿ ರಸ್ತೆಯಲ್ಲಿ ಗುಂಪು ಸೇರಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಪೊಲೀಸರು ಇವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಗಲಭೆಗೆ ಪ್ರಚೋದನೆ ನೀಡುವವರು ಶಾಂತಿ ಸಭೆಗೆ ಬರಲಿಲ್ಲ. ಹೀಗಾದರೆ ಶಾಂತಿ ಕಾಪಾಡುವವರು ಯಾರು ಎಂದು ಪ್ರಶ್ನಿಸಿದರು.

ಸಾಗರ ರಕ್ಷಾ ಕವಚ:

ಕರಾವಳಿ ಪ್ರದೇಶದಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ವರ್ಷಕ್ಕೆ ಎರಡು ಬಾರಿ ನಡೆಸುವ ಸಾಗರ ರಕ್ಷಾ ಕವಚ ಬುಧವಾರ ಆರಂಭವಾಗಿದೆ. ನಗರಕ್ಕೆ ಬರುವ ಎಲ್ಲ ವಾಹನಗಳನ್ನು ನಗರದ ಪ್ರಮುಖ ಪ್ರವೇಶ ರಸ್ತೆಗಳಲ್ಲಿ ತಡೆದು ತಪಾಸಣೆ ನಡೆಸಲಾಗುತ್ತದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಮಾಲ್‌ಗಳಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ ತೀರ ಪ್ರದೇಶಗಳಲ್ಲಿ ಮೀನುಗಾರಿಕಾ ಬೋಟ್ ಸೇರಿದಂತೆ ಎಲ್ಲ ಬೋಟ್‌ಗಳ ಮೇಲೆ ನಿಗಾ ವಹಿಸಿಸಲಾಗಿತ್ತು. ಡಿ.11ರ ಸಂಜೆ 6 ಗಂಟೆ ವರೆಗೆ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ.

ಮದ್ಯ ನಿಷೇಧ ಗುರುಪುರಕ್ಕೆ ಸೀಮಿತ: ಗಲಭೆ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನಾಧ್ಯಂತ 11ರ ತನಕ ವಿಧಿಸಲಾಗಿದ್ದ ಮದ್ಯ ಮಾರಾಟ ಹಾಗೂ ಸರಬರಾಜು ನಿಷೇಧವನ್ನು ಗುರುಪುರ ವಲಯಕ್ಕೆ ಸೀಮಿತಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Write A Comment