ಉಡುಪಿ: ನಾಡಗೀತೆ ಸರಳೀಕರಣಕ್ಕೆ ಸಮಿತಿ ಶಿಫಾರಸು ಮಾಡಿದ್ದು ಯಾವುದೇ ವಿರೋಧವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ. ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರು, ಸಂಘಟನೆಗಳು ಹಾಗೂ ಕನ್ನಡಪರರ ಅಭಿಪ್ರಾಯ ಪಡೆದ ಬಳಿಕ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ನಿರ್ಧಾರ ತಳೆಯಲಿದ್ದಾರೆ ಎಂದರು.
ಕರಾವಳಿಯ ಶಾಸಕರು, ಸಚಿವರು ಕಂಬಳ ನಿಷೇಧ ವಿರುದ್ಧ ತಮ್ಮ ಅಭಿಪ್ರಾಯ, ಮಾಹಿತಿಯನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ. ಕಂಬಳ ಆಟ, ಆರಾಧನೆಯಾಗಿದ್ದು ಪ್ರಾಣಿ ಹಿಂಸೆಯಿಲ್ಲದೆ ಆಚರಣೆ ನಿಟ್ಟಿನಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತಳೆಯಲಾಗುವುದು. ಈ ನಿಟ್ಟಿನಲ್ಲಿ ಯಾವುದೇ ವಿರೋಧ ಸಲ್ಲದು ಎಂದು ಸಚಿವೆ ಉಮಾಶ್ರೀ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಉಮಾಶ್ರೀ:
ಲೈಂಗಿಕ ಕಾರ್ಯಕರ್ತರ ಬದುಕಿನ ಅಧ್ಯಯನಕ್ಕೆ ಸಮಿತಿ ರಚಿಸಿದ್ದು ವರದಿ ಬಂದ ಬಳಿಕ ಪುನರ್ವಸತಿ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಅವರು ಸೋಮವಾರ ಮಣಿಪಾಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೈಂಗಿಕ ಕಾರ್ಯಕರ್ತರನ್ನು ಸಮಾಜ ಬಹಿಷ್ಕೃತರಂತೆ ಕಾಣುತ್ತಿದ್ದು ಸೂಕ್ಷ್ಮ ವಿಚಾರವಾದ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸುವ ಕುರಿತ ಪರ, ವಿರೋಧಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಕಾರಿ, ಸಿಬ್ಬಂದಿ ಕೊರತೆ ನಡುವೆಯೂ ಉತ್ತಮ ಕಾರ್ಯನಿರ್ವಹಣೆ ತೋರುತ್ತಿದೆ. ಶಿಶು ಮರಣ ನಿಯಂತ್ರಣ, ಕಾರ್ಖಾನೆಗೆ ಬರುವ ಮಹಿಳೆಯರ ಅಪೌಷ್ಠಿಕ ಮಕ್ಕಳಿಗೆ ಆಹಾರ ಒದಗಿಸುವಲ್ಲಿ ಮಾಲೀಕರು ದತ್ತಿ ನಿ ಬಳಸಬೇಕು.
ಭಾಗ್ಯಲಕ್ಷ್ಮಿ ಮುಂದುವರಿಕೆ: ಹಿಂದಿನ ಸರಕಾರದ ಉತ್ತಮ ಯೋಜನೆ ರದ್ದು ಮಾಡುವ ದುರುದ್ದೇಶವಿಲ್ಲ. ಬಡ ಹೆಣ್ಣು ಮಕ್ಕಳಿಗೆ, ಹೆಣ್ಣು ಭ್ರೂಣ ಹತ್ಯೆ ತಡೆ, ಶಿಕ್ಷಣ ಒದಗಿಸಲು ಯೋಜನೆ ಪೂರಕವಾಗಿದ್ದು ಪ್ರತಿಪಕ್ಷ ಈ ನಿಟ್ಟಿನಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುವುದು ಸಲ್ಲದು.
