ಕನ್ನಡ ವಾರ್ತೆಗಳು

16 ನೇ ವಾರ್ಷಿಕ ರೋಟರಿ ಅನಾಥಾಶ್ರಮ ಮಕ್ಕಳ ಒಲಂಪಿಕ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ

Pinterest LinkedIn Tumblr

childrns_sports_meet_1

ಮಂಗಳೂರು,ಡಿ.01 : ‘ಸಮಾಜದಲ್ಲಿ ಸರ್ವರೂ ಸಮಾನತೆಯಿಂದ ಸಹಬಾಳ್ವೆ ನಡೆಸುವಂತಾಗಬೇಕು. ಅನಾಥಾಶ್ರಮದ ವಿದ್ಯಾರ್ಥಿಗಳ ಉತ್ಸಾಹಕ್ಕೆ ರೋಟರಿ ಸಂಸ್ಥೆಯು ಪ್ರೋತ್ಸಾಹವನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವ ಸೇವಾ ಮನೋಭಾವ ಮತ್ತು ಈ ಸ್ಪರ್ಧಾಕೂಟವನ್ನು ಆಯೋಜಿಸುವುದು ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ಶ್ರೀ ಎ.ಬಿ. ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಜರಗಿದ ’16 ನೇ ವಾರ್ಷಿಕ ರೋಟರಿ ಅನಾಥಾಶ್ರಮ ಮಕ್ಕಳ ಒಲಂಪಿಕ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ’ವನ್ನು ಉದ್ಘಾಟಿಸಿ, ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

childrns_sports_meet_2 childrns_sports_meet_3 childrns_sports_meet_4

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಅಜಿತ್ ಕುಮಾರ್ ಮಾಲಾಡಿ ಯವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳಿಗೆ ಇದೊಂದು ಸಂತಸ ಮತ್ತು ಸಂಭ್ರಮ ನೀಡುವ ಅವಕಾಶ ಎಂದು ನುಡಿದು, ಅವರಿಗೆ ಸದಾ ಸಮಾಜದ ಬೆಂಬಲವಿದೆ ಎಂದು ಆಶ್ವಾಸನೆ ನೀಡಿದರು. ರೋಟರಿ ಜಿಲ್ಲಾ ಸಹಾಯಕ ಗವರ್ನರರಾದ ರೊ| ಸತೀಶ್ ಬೋಳಾರ್ ರವರು ಗೌರವ ಅತಿಥಿಯಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ತಮ್ಮಲ್ಲಿ ಅಡಗಿದ ಉತ್ತಮ ಪ್ರತಿಭೆಯನ್ನು ಹೊರತರಲು ಇದೊಂದು ಸೂಕ್ತ ಅವಕಾಶ ಮತ್ತು ವೇದಿಕೆ ಎಂದು ನುಡಿದರು.

ಈ ಸ್ಪರ್ಧಾಕೂಟದ ಸಂಘಟನಾ ಅಧ್ಯಕ್ಷರಾದ ರೊ| ಡಾ. ದೇವದಾಸ ರೈ ಯವರು ಈ 16 ನೇ ವಾರ್ಷಿಕ ಸ್ಪರ್ಧಾಕೂಟವನ್ನು ತಮ್ಮ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಆಯೋಜಿಸಲಾಗಿದೆ ಹಾಗೂ ಈ ಸ್ಪರ್ಧಾಕೂಟದಲ್ಲಿ ನಗರದ 10 ಅನಾಥಾಶ್ರಮದ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿ ವಿವಿಧ ಸ್ಪರ್ಧೆಗಳ ವಿವರ ನೀಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ರೊ| ಸಂತೋಷ್ ಶೇಟ್ ಸ್ವಾಗತಿಸಿದರು, ರೊ| ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಕ್ರೀಡಾ ಪಥಸಂಚಲನದ ನಂತರ ಜರಗಿದ ವಿವಿಧ ಸ್ಪರ್ಧಾಕೂಟಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿದ್ದರು. ರೊ| ರವಿ ಜಲಾನ್ ರವರು ಸ್ಪರ್ಧಾಕೂಟವನ್ನು ಆಯೋಜಿಸಿದ್ದರು.

childrns_sports_meet_5 childrns_sports_meet_6

ಈ ಸಂದರ್ಭದಲ್ಲಿ ಭಾರತೀಯ ಶಿಶು ಮತ್ತು ಮಕ್ಕಳ ಶಾಸ್ತ್ರತಜ್ಞರ ಸಂಘದ ದ.ಕ. ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ. ಶಿವರಾಮ ರೈ ನೇತ್ರತ್ವದಲ್ಲಿ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರದೊಂದಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ರೋಟರ್‍ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷರಾದ ರೊ| ಪ್ರಸಾದ್ ಕುಮಾರ್ ವಂದಿಸಿದರು.

childrns_sports_meet_8 childrns_sports_meet_7

ಈ ಸ್ಪರ್ಧಾಕೂಟವನ್ನು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆ, ರೋಟರ್‍ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆ ಮತ್ತು ಭಾರತೀಯ ಶಿಶು ಮತ್ತು ಮಕ್ಕಳ ಶಾಸ್ತ್ರತಜ್ಞರ ದ.ಕ. ಜಿಲ್ಲಾ ಶಾಖೆಯ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಡಾ. ಭಾಸ್ಕರ್ ಶೆಟ್ಟಿ, ಡಾ. ಅಶ್ವಿಜ್ ಶ್ರಿಯಾನ್, ಅನಿಲ್ ಶೆಟ್ಟಿ, ನವೀನ್ ಕುಮಾರ್, ರಾಜ್‌ಗೋಪಾಲ್ ರೈ ಉಪಸ್ಥಿತರಿದ್ದರು.

Write A Comment