(ಕಂಬಳದ ಸಂಗ್ರಹ ಚಿತ್ರ)
ಉಡುಪಿ: ಕಂಬಳ ನಿಷೇಧದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ ಉಡುಪಿಯಲ್ಲಿ ದೈವ ಕಂಬಳವೊಂದು ನಡೆದಿದೆ. ಇದು ಕೋಣಗಳ ರೇಸ್ ಅಲ್ಲ, ಬದಲಾಗಿ ಹರಕೆ ಸ್ವರೂಪದಲ್ಲಿ ನಡೆಯುವ ದೈವದ ಆರಾಧನೆ.ಆದರೆ ನಿಷೇಧ ಭೀತಿಯಿಂದ ದೈವ ಕಂಬಳವೂ ಹೊರತಾಗಿರಲಿಲ್ಲ. ವರ್ಷಂಪ್ರತಿ ಸಾವಿರಾರು ಜನ ಸೇರುತ್ತಿದ್ದ ದೈವ ಕಂಬಳ ಈ ಬಾರಿ ಕಳೆಕುಂದಿತ್ತು.
ಕರಾವಳಿಯುದ್ದಕ್ಕೂ ಕಂಬಳ ನಿಷೇಧದ್ದೇ ಸುದ್ದಿ. ಸರ್ಕಾರದ ಆದೇಶದಿಂದ ಆತಂಕಗೊಂಡ ಲಕ್ಷಾಂತರ ಕಂಬಳ ಅಭಿಮಾನಿಗಳಿಗೆ ಕೊಂಚ ನೆಮ್ಮದಿಯಾಗುವ ಬೆಳವಣಿಗೆ ಭಾನುವಾರ ನಡೆಯಿತು. ಆದೇಶದ ಹೊರತಾಗಿಯೂ ಉಡುಪಿ ಮೂಡುಬೆಟ್ಟಿನಲ್ಲಿ ದೈವ ಕಂಬಳ ನಡೆಯಿತು. ಆರಾಧನಾ ಸ್ವರೂಪದ ಕಂಬಳ ಹೇಗೆ ನಡೆಸಬಹುದು ಅನ್ನೋದಕ್ಕೆ ಈ ಕಂಬಳ ಮಾದರಿಯಾಗಿತ್ತು. ಎಂಟು ನೂರು ವರ್ಷಗಳ ಇತಿಹಾಸ ಇರುವ ಮೂಡುಬೆಟ್ಟು ಸಿರಿ ಕುಮಾರ ಕಂಬಳ ಒಂದು ದೈವಾರಾಧನೆ. ಕುಮಾರ ದೈವದ ಸಮ್ಮುಖದಲ್ಲಿ ಹರಕೆಯ ಸ್ವರೂಪದಲ್ಲಿ ಕೋಣಗಳನ್ನು ಓಡಿಸೋದು ಪದ್ಧತಿ. ಯಾವುದೇ ತಡೆಯಿಲ್ಲದೆ ಈ ವರ್ಷವೂ ಸಂಪ್ರದಾಯ ಪಾಲಿಸಲಾಗಿದೆ.
ಮನೆಯಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾದಾಗ, ಜಾನುವಾರುಗಳಿಗೆ ರೋಗಬಾಧೆ ಕಾಣಿಸಿಕೊಂಡಾಗ ಅಥವಾ ಕೃಷಿಗೆ ಅಡ್ಡಿಯಾದಾಗ ದೈವ ಕಂಬಳದಲ್ಲಿ ಕೋಣ ಓಡಿಸುವ ಹರಕೆ ಹೊರುತ್ತಾರೆ. ಸರ್ಕಾರದ ಆದೇಶದಿಂದ ಹರಕೆ ಹೊತ್ತವರಿಗೆ ಏನು ಮಾಡೋದು ಎಂಬ ಆತಂಕವಿತ್ತು. ಆದರೆ ಕೋಣಗಳಿಗೆ ಓಂದೇಟೂ ಕೊಡದೆ, ಕೈಯ್ಯಲ್ಲಿ ಬೆತ್ತವನ್ನೇ ಹಿಡಿಯದೆ ಕಂಬಳ ನಡೆಸಿ ಮೂಡುಬೆಟ್ಟು ಮನೆಯವರು ಮಾದರಿಯಾಗಿದ್ದಾರೆ. ಪೊಲೀಸ್ ಭದ್ರತೆ, ಹಾಗೂ ಪಶು ಸಂಗೋಪನಾ ಅಧಿಕಾರಿಗಳ ಕಣ್ಗಾವಲಿನಲ್ಲಿ ಕಂಬಳ ನಡೆದಿತ್ತು. ದೈವ ಕಂಬಳ ನಡೆಯುತ್ತೋ ಇಲ್ಲವೋ ಎಂಬ ಭೀತಿಯಲ್ಲಿ ಹೆಚ್ಚಿನ ಕೋಣಗಳು ಭಾಗವಹಿಸದೇ ದೂರವುಳಿದ ಕಾರಣ ದೈವ ಕಂಬಳ ಕಳೆಗುಂದಿತ್ತು.
ಮೋಜು ಜೂಜಿನ ಹೊರತಾಗಿ ನಡೆಯುವ ಕಂಬಳಕ್ಕೆ ಅವಕಾಶ ನೀಡಬೇಕೆನ್ನೋದು ಕರಾವಳಿಗರ ಅಭಿಮತ. ಹಿಂಸೆ ಇಲ್ಲದೆಯೂ ಕೋಣಗಳ ಓಟ ನಡೆಸಬಹುದು ಅನ್ನೋದಕ್ಕೆ ಈ ದೈವ ಕಂಬಳವೇ ಸಾಕ್ಷಿ.