ಕನ್ನಡ ವಾರ್ತೆಗಳು

ವಿಧವಾ ವಿವಾಹಕ್ಕೆ ಬ್ರಾಹ್ಮಣ ಯುವಕ ಆಸಕ್ತಿ | ಕುದ್ರೋಳಿ ಕ್ಷೇತ್ರದಲ್ಲಿ ಮುಂದಿನ ದಸರಾಕ್ಕೆ ಸಾಮೂಹಿಕ ವಿಧವಾ ವಿವಾಹ  : ಪೂಜಾರಿ

Pinterest LinkedIn Tumblr

Pujary_Press_Mutalik_1

ಮಂಗಳೂರು: ಕುದ್ರೋಳಿ ಕ್ಷೇತ್ರದಲ್ಲಿ ಆಸಕ್ತರಿಗೆ ವಿಧವಾ ವಿವಾಹ ಮಾಡಿಸುವುದಾಗಿ ತಾವು ಈ ಮೊದಲು ಘೋಷಿಸಿರುವ ಬಗ್ಗೆ ಪತ್ರಿಕೆಯಲ್ಲಿ ಓದಿರುವ ಬೆಂಗಳೂರಿನ ಬ್ರಾಹ್ಮಣ ಯುವಕನೊಬ್ಬ ತಾವು ಯಾವುದೇ ಜಾತಿಯ, ಆದರೆ ಸಸ್ಯಾಹಾರಿ ವಿಧವೆಯನ್ನು ಮದುವೆಯಾಗ ಬಯಸುವುದಾಗಿ ಪತ್ರ ಬರೆದಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಶನಿವಾರ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಎದುರು ಪತ್ರವನ್ನು ಪ್ರದರ್ಶಿಸಿದರು.

ಉತ್ತಮ ವಿದ್ಯಾಭ್ಯಾಸ ಹಾಗೂ ಅನುಕೂಲವಿರುವ ಯುವಕ ಎಚ್.ಎಸ್.ಮಾಲತೇಶ್ ಅವರ ಬೇಡಿಕೆಗೆ ಅನುಗುಣವಾಗುವ ಯಾವುದೇ ವಿಧವೆ ಒಪ್ಪಿಕೊಂಡು ಕ್ಷೇತ್ರಕ್ಕೆ ಬಂದರೆ ಅವರಿಗೆ ಉಚಿತವಾಗಿ ಮದುವೆ ನೆರವೇರಿಸಿಕೊಡಲಾಗುವುದು ಎಂದು ಹೇಳಿದರು. ಇದೇ ವೇಳೆ ದಸರಾ ಸಮಯದಲ್ಲಿ ಸಾಮೂಹಿಕವಾಗಿ ವಿಧವೆಯರ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದು ಪೂಜಾರಿ ತಿಳಿಸಿದರು.

ಮಡೆಸ್ನಾನ / ಎಡೆಸ್ನಾನ ಬೇಡ :

ರಾಜ್ಯದ ದೇವಸ್ಥಾನಗಳಲ್ಲಿ ವಿವಾದಿತ ಮಡೆಸ್ನಾನವೂ ಬೇಡ, ಎಡೆಸ್ನಾನವೂ ಬೇಡ. ಅದರ ಬದಲು ಉರುಳು ಸೇವೆ ಮಾಡಿದರೆ ಸಾಕು. ಇನ್ನು ಮುಂದೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತೀ ವರ್ಷ ಷಷ್ಠಿ ಸಂದರ್ಭ ಎರಡು ದಿನ ಉರುಳು ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪೂಜಾರಿ ಹೇಳಿದರು.

ಮಡೆ ಅಂದರೆ ಅದು ಎಂಜಲು. ಆ ಎಂಜಲಿನಲ್ಲಿ ರೋಗ ಇದ್ದವರು ಉರುಳಾಡಿದರೆ, ಆ ರೋಗ ಇನ್ನೊಬ್ಬರಿಗೆ ಹರಡುವುದಿಲ್ಲವೇ? ಉಂಡ ಎಲೆಯ ಮೇಲೆ ಉರುಳುವುದು ಯಾವ ಮಾನವೀಯತೆ. ಇದು ಮೇಲು-ಕೀಳು ಎಂಬ ಸಂದೇಶ ನೀಡುವುದಿಲ್ಲವೇ ? ಆ ಎಂಜಲು ಕೊಳಕು ಹೌದಾ? ಅಲ್ಲವಾ? ಎಂದು ಕೇಳಿದರು. ಎಂಜಲೆಲೆ ಮೇಲೆ ಉರುಳಾಡುವುದು ಸ್ವಚ್ಛತೆಯಾ ಎಂದು ಪ್ರಧಾನಿ ಮೋದಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಭಾರತದ ದೇವಸ್ಥಾನದಲ್ಲಿ ಇಲ್ಲದ ಈ ಕ್ರಮ ಇಲ್ಲಿ ಯಾಕೆ ಎಂದು ಪ್ರಶ್ನಿಸಿದ ಜನಾರ್ದನ ಪೂಜಾರಿ ಅವರು, ದೇವರ ನೈವೇದ್ಯ ಪೂಜ್ಯತೆಯನ್ನು ಪಡೆದಿದೆ. ಇದರ ಮೇಲೆ ಹೊರಳಾಡಿ ಎಂದು ಪೇಜಾವರ ಶ್ರೀಗಳು ಹೇಳುತ್ತಿದ್ದಾರೆ. ಅದಕ್ಕೆ ನಮ್ಮ ಬೆವರು ತಾಗುವುದಿಲ್ಲವೇ. ದೇವರ ನೈವೇದ್ಯವನ್ನು ಕೊಳಕು ಮಾಡುವುದು ಸರಿಯಾ ಎಂಬುದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಅರ್ಚಕ ಹುದ್ದೆಗೆ ಎಲ್ಲರೂ ಅರ್ಹರು:

ಹಿಂದೂ ದೇವಾಲಯಗಳಲ್ಲಿ ಅರ್ಚಕ ಹುದ್ದೆಗೆ ಎಲ್ಲ ಜಾತಿಯವರಿಗೆ ಅರ್ಹತೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯದ ಎಲ್ಲ ದೇವಾಲಯದಲ್ಲೂ ಇದನ್ನು ಜಾರಿಗೊಳಿಸುವುದು ಸರಕಾರಕ್ಕೆ ಸುಲಭವಾಗಿದೆ. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಬೇರೆ ಜಾತಿಯವರಿಗೆ, ಅದರಲ್ಲೂ ಮಹಿಳೆಯರಿಗೆ, ವಿಧವೆಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಜನಾರ್ದನ ಪೂಜಾರಿ ಆಗ್ರಹಿಸಿದರು.

ಪತ್ರಕರ್ತನಿಗೆ ಹಲ್ಲೆಗೆ ಖಂಡನೆ:

ಗಂಗೊಳ್ಳಿಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಪತ್ರಕರ್ತರ ಮೇಲೆ ನಿರಂತರವಾಗಿ ದಾಳಿ ನಡೆಸುವ ಚಾಳಿ ಈಗ ಆರಂಭವಾಗಿದ್ದು, ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರನ್ನು ತತ್‌ಕ್ಷಣವೇ ಬಂಧಿಸುವಂತೆ ರಾಜ್ಯ ಗೃಹ ಸಚಿವರನ್ನು ಆಗ್ರಹಿಸುತ್ತೇನೆ ಎಂದು ಹೇಳಿದರು.

ಕಂಬಳ ನಿಷೇಧ ಕಾನೂನು ತಿದ್ದುಪಡಿಗೆ ಅವಕಾಶ:

ಕಂಬಳ ನಿಷೇಧ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ಮಧ್ಯಪ್ರವೇಶಿಸಬೇಕು. ಈ ಕುರಿತು ಕಂಬಳ ಸಮಿತಿ ಪ್ರಮುಖರು ಕೇಂದ್ರ ಕಾನೂನು ಸಚಿವರಿಗೆ ಮೊದಲು ಮನವಿಗಳನ್ನು ಸಲ್ಲಿಸಬೇಕು. ಅವರು ಅದರ ಆಧಾರದಲ್ಲಿ ಕಾರ್ಯದರ್ಶಿಯವರ ಜತೆಗೆ ಚರ್ಚಿಸಿ, ‘ಪ್ರಾಣಿ ಹಿಂಸೆ ಕಾಯಿದೆಗೆ ತಿದ್ದುಪಡಿ’ ಮಾಡಬೇಕು. ಇದು ಅರ್ಧ ತಾಸಿನ ಕೆಲಸ. ಬಳಿಕ ಸಂಸತ್ತಿನಲ್ಲಿ ಇದಕ್ಕೆ ಅಂಗೀಕಾರ ಪಡೆಯಬೇಕು ಎಂದು ಪೂಜಾರಿ ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಆರ್.ಪದ್ಮರಾಜ್, ಟ್ರಸ್ಟಿ ಹರಿಕೃಷ್ಣ ಬಂಟ್ವಾಳ, ಡಾ.ಅನುಸೂಯ, ದೇವೇಂದ್ರ, ಡಿ.ಡಿ. ಕಟ್ಟೆಮಾರ್, ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Write A Comment