ಕನ್ನಡ ವಾರ್ತೆಗಳು

ನವೆಂಬರ್ 30 ಕಿಸ್ ಆಫ್ ಲವ್ ಗೆ ಅನುಮತಿ ನಿರಾಕರಣೆ : ಎಮ್ ಎನ್ ರೆಡ್ಡಿ.

Pinterest LinkedIn Tumblr

benglore_police_commissione

ಬೆಂಗಳೂರು,ನ.26: ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಆಹಾರವಾಗಿದ್ದ ಕಿಸ್ ಆಫ್ ಲವ್ ಆಚರಣೆಗೆ ಬೆಂಗಳೂರಿನಲ್ಲಿ ಅವಕಾಶವಿಲ್ಲ. ನವೆಂಬರ್ 30 ರಂದು ಟೌನ್ ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನವೆಂಬರ್ 30 ರಂದು ಕಿಸ್ ಆಫ್ ಲವ್ ಆಚರಣೆಗೆ ಅನುಮತಿ ಕೇಳಿ ಮನವಿ ಸಲ್ಲಿಸಲಾಗಿತ್ತು. ಆದರೆ ಇದು ಭಾರತೀಯ ದಂಡ ಸಂಹಿತೆಯ 294(ಎ) ಉಲ್ಲಂಘನೆಯಾಗಲಿದ್ದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ

ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ? ಹಿನ್ನೆಲೆಯೇನು? ಉದ್ದೇಶವೇನು? ಎಂಬುದರ ಬಗ್ಗೆ ಮಾಹಿತಿ ನೀಡಲು ಆಯೋಜಕರ ಬಳಿ ಕೇಳಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ವಿವರ ಸಲ್ಲಿಕೆಯಾಗಿಲ್ಲ. ಇಂಥ ಆಚರಣೆಗಳು ಶಾಂತಿ ಮತ್ತು ಭದ್ರತೆಗೆ ಭಂಗ ತರುವಂತೆ ಕಂಡುಬರುತ್ತಿದ್ದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಿಸ್ ಆಫ್ ಲವ್ ಬಗ್ಗೆ ರಾಜ್ಯಾದ್ಯಂತ ತೀವ್ರ ವಿರೊಧ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಚರಣೆಗೆ ಅವಕಾಶ ನೀಡಿ ಅಹಿತಕರ ಘಟನೆಗಳಿಗೆ ಕಾರಣವಾದರೆ ಯಾರು ಜವಾಬ್ದಾರಿ? ಎಂದು ಆಯೋಜಕರನ್ನು ಕೇಳಲಾಗಿತ್ತು. ಈ ಬಗ್ಗೆಯೂ ಸ್ಪಷ್ಟ ಉತ್ತರ ಬಂದಿರಲಿಲ್ಲ ಎಂದು ಹೇಳಿದ್ದಾರೆ.

ಐಪಿಸಿ 294(ಎ) ಏನು ಹೇಳುತ್ತದೆ? ಸಾರ್ವಜನಿಕ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸುವುದಕ್ಕೆ ಈ ಸೆಕ್ಷನ್ ತಡೆ ಒಡ್ಡುತ್ತದೆ. ಕೆಟ್ಟ ರೀತಿಯಲ್ಲಿ ಕುಣಿಯುವುದು, ನರ್ತಿಸುವುದು, ಅಶ್ಲೀಲ ಪದಗಳನ್ನು ಬಳಸಿ ಘೋಷಣೆ ಕೂಗುವುದನ್ನು ಈ ಸೆಕ್ಷನ್ ಸಂಪೂರ್ಣವಾಗಿ ನಿಷೇಧಿಸುತ್ತದೆ. ಅಲ್ಲದೇ ಈ ರೀತಿ ವರ್ತಿಸಿದವರಿಗೆ ಮೂರು ತಿಂಗಳು ಜೈಲು ಅಥವಾ ದಂಡ ವಿಧಿಸುವ ಅವಕಾಶವನ್ನು ನೀಡುತ್ತದೆ. ಹಿಂದೆ ಸರಿದಿದ್ದ ರಚಿತಾ ತನೇಜಾ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕಿಸ್ ಆಫ್ ಲವ್ ಆಯೋಜಕಿ ರಚಿತಾ ತನೇಜಾ ತಾನು ಕಾರ್ಯಕ್ರಮದಿಂದ ಹಿಂದೆ ಸರಿಯುತ್ತಿರುವುದಾಗಿ ಸೋಮವಾರ ತಿಳಿಸಿದ್ದರು. ಆದರೆ ಕೆಲ ಫೇಸ್ ಬುಕ್ ನ ಕಿಸ್ ಆಫ್ ಲವ್ ಕಾರ್ಯಕರ್ತರು ತಾವೇ ನವೆಂಬರ್ 30 ರಂದು ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದ್ದರು.

Write A Comment