ಕನ್ನಡ ವಾರ್ತೆಗಳು

ರಾಜ್ಯದ ಸರಕಾರಿ ಆಸ್ಪತ್ರೆಗೆ ತಜ್ಞ ವೈದ್ಯರ ನೇವಕ : ಸಚಿವ ಯು.ಟಿ ಖಾದರ್

Pinterest LinkedIn Tumblr

UT_Kadar_Press_2

ಮಂಗಳೂರು, ನ.25: ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ನಿವೃತ್ತ ತಜ್ಞ ವೈದ್ಯ(60ರಿಂದ 65 ವರ್ಷ)ರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಹಳಷ್ಟು ನಿವೃತ್ತ ತಜ್ಞ ವೈದ್ಯರು ಸೇವೆ ನೀಡಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದರು.

ರಾಜ್ಯದ ಸಮುದಾಯ ಆರೋಗ್ಯ ಕೇಂದ್ರ, ಸಾರ್ವ ಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳಲ್ಲಿ ಈ ಮೂಲಕ ನೇಮಕಗೊಂಡ ವೈದ್ಯರು ಸೇವೆ ಸಲ್ಲಿಸಲಿದ್ದಾರೆ. 3 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಈ ನೇಮಕಾತಿ ಊರ್ಜಿತದಲ್ಲಿರುತ್ತದೆ. ಸರಕಾರಿ ಸೇವೆಯಲ್ಲಿ ಅವರ ಸೇವೆಯನ್ನು ಸಕ್ರಮಗೊಳಿಸಲಾಗುವುದಿಲ್ಲ ಎಂಬ ಷರತ್ತಿನೊಂದಿಗೆ ಆಯಾ ಜಿಲ್ಲಾಧಿಕಾರಿ ನೇಮಕಕ್ಕೆ ಅನುಮತಿ ನೀಡಲಾಗಿದೆ. ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ತಜ್ಞ ವೈದ್ಯರು ಇಚ್ಚಿಸಿದ್ದಲ್ಲಿ ದಿನದಲ್ಲಿ ಗಂಟೆಯ ಆಧಾರದಲ್ಲಿ ಸೇವೆ ನೀಡಲೂ ಅವಕಾಶವಿದೆ. ಮುಖ್ಯವಾಗಿ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಸೂತಿ, ಅರಿವಳಿಕೆ ಹಾಗೂ ಮಕ್ಕಳ ತಜ್ಞರ ಭಾರೀ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಸೂತಿ, ಅರಿವಳಿಕೆ ಹಾಗೂ ಮಕ್ಕಳ ತಜ್ಞರನ್ನು ಮಾಸಿಕ 50 ಸಾವಿರ ರೂ. ವೇತನದಲ್ಲಿ ನೇಮಕ ಮಾಡಲಾಗುವುದು ಎಂದರು.

ರೋಗಿವಾರು ತಿಂಗಳಿಗೆ ರಿಟೈನರ್ ಶುಲ್ಕವಾಗಿ 5,000 ರೂ., ಸಿಸೇರಿಯನ್ ಸಂದರ್ಭ ಶಸ್ತ್ರಚಿಕಿತ್ಸೆ ನಡೆ ಸುವ ಪ್ರಸೂತಿ ತಜ್ಞರಿಗೆ ತಲಾ 1,500 ರೂ., ಅರಿವಳಿಕೆ ತಜ್ಞರಿಗೆ 1,000 ರೂ., ಮತ್ತು ಮಕ್ಕಳ ತಜ್ಞರಿಗೆ 500 ರೂ. ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಕೆಎಚ್‌ಎಸ್‌ಆರ್‌ಡಿಪಿ ಯೋಜನೆಯಡಿ ತಜ್ಞ ವೈದ್ಯರು ಹೊರರೋಗಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಲ್ಲಿ ದಿನಕ್ಕೆ 1,000 ರೂ.ನಂತೆ ಗೌರವಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ತಜ್ಞ ವೈದ್ಯರು ಹೊರ ರೋಗಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಲ್ಲಿ ದಿನವೊಂದಕ್ಕೆ ತಲಾ 1,000 ರೂ.ನಂತೆ ಗೌರವಧನ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಅರಿವಳಿಕೆ ತಜ್ಞರ ಕೊರತೆ ಬಹಳಷ್ಟಿರುವುದರಿಂದ ರೇಡಿಯೋಗ್ರಫಿ ಟೆಲಿ ಮೆಡಿಸಿನ್ ಎಂಬ ಆನ್‌ಲೈನ್ ವ್ಯವಸ್ಥೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯ ಮೂಲಕ ರೇಡಿಯಾಲಜಿ ತಂತ್ರಜ್ಞರಿಗೆ ತಾಂತ್ರಿಕ ಕೆಲಸದ ಬಗ್ಗೆ ತರಬೇತಿ ನೀಡಿ, ರೋಗಿಯ ವರದಿಯನ್ನು ಆನ್‌ಲೈನ್ ಮೂಲಕ ತಜ್ಞ ರೇಡಿಯಾಲಜಿ ವೈದ್ಯರಿಗೆ ರವಾನಿಸಿ ಚಿಕಿತ್ಸೆ ಒದಗಿಸಲಾಗುವುದು ಎಂದು ಸಚಿವ ಖಾದರ್ ಹೇಳಿದರು. ಡಿ.5ರಂದು ವೆನ್ಲಾಕ್‌ನ ಸೆಮಿ ಐಸಿಯು, ಎಸ್‌ಟಿಪಿ, ಶವಾಗಾರ ಉದ್ಘಾಟನೆ: ವೆನ್ಲಾಕ್‌ನಲ್ಲಿ ಈಗಾ ಗಲೇ ರಚನೆಯಾಗಿರುವ ಸೆಮಿ ಐಸಿಯು, ಹೆಚ್ಚು ವರಿ ವೆಂಟಿಲೇಟರ್‌ಗಳು, ಎಸ್‌ಟಿಪಿ ಹಾಗೂ ಅತ್ಯಾಧುನಿಕ ಶವಾಗಾರದ ಉದ್ಘಾಟನಾ ಸಮಾರಂಭ ಡಿಸೆಂಬರ್ 5ರಂದು ನಡೆಯಲಿದೆ ಎಂದು ಖಾದರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಎನ್.ಎಸ್.ಕರೀಂ, ಮುಹಮ್ಮದ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.

Write A Comment