ಕನ್ನಡ ವಾರ್ತೆಗಳು

ಕುಂದಾಪುರ ತಾಲೂಕು ಕೆ.ಡಿ.ಪಿ. ಸಭೆಗೆ ಬಾರದವರಿಗೆ ನೋಟಿಸ್ ನೀಡಲು ಸಚಿವ ಸೊರಕೆ ಖಡಕ್ ಸೂಚನೆ

Pinterest LinkedIn Tumblr

ಕುಂದಾಪುರ: ತಾ.ಪಂ ಸಭೆಗೆ ಹಾಜರಾಗದ ವರಾಹಿ ಇಲಾಖಾ ಅಧಿಕಾರಿಗಳ ವರ್ತನೆಯ ಕುರಿತು ವಿಭಿನ್ನ ವ್ಯಾಖ್ಯಾನ. ಡಿಸೆಂಬರ್ ತಿಂಗಳಲ್ಲಿ ವರಾಹಿ ನೀರು ಬಿಡುವ ಗೊಂದಲದ ಮುಂದುರಿಕೆ. ಬಾಕಿ ಉಳಿದಿರುವ ತಾ.ಪಂ ಅನುದಾನವನ್ನು ಶೀಘ್ರ ಖಾಲಿ ಮಾಡಲು ಕ್ರಮ ಕೈಗೊಳ್ಳಲು ಸಲಹೆ. ಜನವರಿ ಒಳಗೆ ರಸ್ತೆಯ ದುರಸ್ತಿ ಹಾಗೂ ಇತರ ಕಾಮಗಾರಿ ಮುಗಿಸಲು ಇಂಜಿನಿಯರಿಂಗ್ ಇಲಾಖೆಗೆ ತಾಕೀತು. ಅಭಿವೃದ್ದಿ ಕಾರ್ಯಕ್ರಮಗಳಿಗಾಗಿ ವನ್ಯ ಜೀವಿ ರಕ್ಷಿತಾರಣ್ಯ ನಿಯಮ ವ್ಯಾಪ್ತಿಯೊಳಗೆ ಸರಳೀಕರಣ ಕ್ರಮಕ್ಕೆ ಸೂಚನೆ. ಎಂಡೋಸಲ್ಫಾನ್ ಪೀಡಿತರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ’ನೀರಾಮಯ’ ವಿಮಾ ಯೋಜನೆ ಮಾಡಿಸಲು ಸಲಹೆ. ಕುಂದಾಪುರದ ಒಳಚರಂಡಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರೀಯೆಯನ್ನು ಆದಷ್ಟು ಶೀಘ್ರವಾಗಿ ಮುಗಿಸಲು ಕಾರ್ಯತಂತ್ರ ರೂಪಿಸಲು ಸೂಚನೆ.

ತಾಲ್ಲೂಕು ಕೆಡಿಪಿ ಸಭೆಗೆ ಬಾರದೆ ಇದ್ದವರಿಗೆ ನೋಟಿಸು ನೀಡಲು ಸಚಿವರ ಸೂಚನೆ ಸೇರಿದಂತೆ ಹಲವು ವಿಚಾರಗಳು ಸೋಮವಾರ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾಪಗೊಂಡವು.

Sorake_KDP_Meeting (9) Sorake_KDP_Meeting (10) Sorake_KDP_Meeting (2) Sorake_KDP_Meeting (4) Sorake_KDP_Meeting (5) Sorake_KDP_Meeting (8) Sorake_KDP_Meeting (7) Sorake_KDP_Meeting (6) Sorake_KDP_Meeting (3) Sorake_KDP_Meeting Sorake_KDP_Meeting (1)

ಸಭೆಯಲ್ಲಿ ವಿಷಯ ಪ್ರಾಸ್ತಾಪ ಮಾಡಿದ ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ ಅವರು ವರಾಹಿ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಜನರಿಗೆ ಅನೇಕ ಸಮಸ್ಯೆಗಳಿದ್ದು, ಈ ಕುರಿತು ಚರ್ಚೆ ನಡೆಸಲು ಸಭೆಗೆ ಹಾಜರಾಗುವಂತೆ ಅನೇಕ ಬಾರಿ ನೋಟಿಸು ನೀಡಿದ್ದರೂ, ವರಾಹಿ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು ತಾ.ಪಂ ಹಾಗೂ ಜಿ.ಪಂ ಗಳ ನೇರ ವ್ಯಾಪ್ತಿಗೆ ಸಂಬಂಧಿಸಿದ ಇಲಾಖಾ ಆಧಿಕಾರಿಗಳಿಗೆ ಮಾತ್ರ ಸಭೆಗೆ ಹಾಜರಾಗಲು ನೋಟಿಸು ಕಳುಹಿಸಲು ಅವಕಾಶವಿದೆ. ಬೃಹತ್ ನೀರಾವರಿ ರಾಜ್ಯ ಮಟ್ಟಕ್ಕೆ ಸಂಬಂಧಿಸಿದ ಇಲಾಖೆಯಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಕರೆದ ಸಭೆಯಲ್ಲಿ ಅವರು ಹಾಜರಿರಬೇಕು ಎಂದು ಸಮಜಾಯಿಕೆ ನೀಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರು ತಾ.ಪಂ ಸಭೆಯ ಕಾರ್‍ಯಸೂಚಿಯಲ್ಲಿ ಪ್ರಾಸ್ತಾಪವಾಗುವ ಇಲಾಖೆಗಳಿಗೆ ಮುಂಚಿತವಾಗಿ ಸಭೆಗೆ ಹಾಜರಾಗಲು ಪಂಚಾಯತ್ ರಾಜ್ ಕಾಯಿದೆಯಲ್ಲಿ ಅವಕಾಶವಿದೆ ಎಂದು ಹೇಳಿದರಲ್ಲದೆ, ನಿಯಮದ ಪುಸ್ತಕವನ್ನು ಸಭೆಗೆ ತರಿಸಿ ನಿಯಮಾವಳಿಯನ್ನು ಓದಿದರು.

ಡಿಸೆಂಬರ್ ಅಂತ್ಯದ ವೇಳೆಯಲ್ಲಿ ವರಾಹಿ ಕಾಲುವೆಗಳಲ್ಲಿ ನೀರು ಹರಿಸುತ್ತೇವೆ ಎನ್ನುವ ಹೇಳಿಕೆಗೆ ಇಲಾಖೆ ಬದ್ದವಾಗಿದೆಯೇ ಎನ್ನುವ ಪ್ರತಾಪ್‌ಚಂದ್ರ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ವರಾಹಿ ಅಧಿಕಾರಿ ನಟರಾಜ್ ಅವರು ಡಿಸೆಂಬರ್ ಒಳಗೆ ಬಲ ದಂಡೆ ಯೋಜನಾ ಪ್ರದೇಶ ಸೇರಿದಂತೆ ಪ್ರಮುಖ ಕಾಲುವೆಗಳಲ್ಲಿ ನೀರು ಹರಿಸಲು ಇಲಾಖೆ ಪ್ರಯತ್ನ ನಡೆಸುತ್ತಿದೆ. ೫೦೦-೬೦೦ ಹೇಕ್ಟರ್ ಪ್ರದೇಶಗಳಿಗೆ ನೀರು ಹರಿಸಬೇಕು ಎನ್ನುವ ಉದ್ದೇಶವಿದ್ದರೂ, ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ತೊಡಕಾಗುತ್ತಿದೆ ಎಂದು ಉತ್ತರಿಸಿದ್ದು, ಸಚಿವರನ್ನು ಹಾಗೂ ವಿಧಾನಪರಿಷತ್ ಸದಸ್ಯರನ್ನು ಕೆರಳುವಂತೆ ಮಾಡಿತ್ತು. 35ವರ್ಷಗಳಿಂದ ಇದೆ ರೀತಿ ಸಬೂಬೂ ಹೇಳಿ ಸರ್ಕಾರವನ್ನು ಹಾಗೂ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ. ತೊಡಕುಗಳನ್ನೆ ಪಟ್ಟಿ ಮಾಡುತ್ತಾ ಹೋದರೆ ಕಾಲ ಮಿತಿಯಲ್ಲಿ ಈ ಯೋಜನೆ ಹೇಗೆ ಪೂರ್ಣಗೊಳ್ಳಲು ಸಾಧ್ಯ ಎಂದು ತರಾಟೆ ತೆಗೆದುಕೊಂಡರು. ಈ ವೇಳೆಯಲ್ಲಿ ಸಮಜಾಯಿಕೆ ನೀಡಲು ಪ್ರಯತ್ನಿಸಿದ ಅಧಿಕಾರಿಗಳು ಅರಣ್ಯ ಇಲಾಖೆಯ ವಿಳಂಭ ನೀತಿಯಿಂದಾಗಿ ತೊಡಕಾಗುತ್ತಿದೆ ಎಂದು ಹೇಳಿದಾಗ ಮಧ್ಯ ಪ್ರವೇಶಿಸಿ ಮಾಹಿತಿ ಹಂಚಿಕೊಂಡ ಜಿಲ್ಲಾಧಿಕಾರಿಯವರು ಅರಣ್ಯ ಇಲಾಖೆಯ ಅನುಮತಿಗೆ ಸಂಬಂಧಿಸಿದ ಪ್ರಾಸ್ತಾಪನೆಗಳನ್ನು ಕೂಡಲೇ ಕಳುಹಿಸಿ, ತಾನು ಈ ಸಮಸ್ಯೆ ತಿಳಿಗೊಳಿಸಲು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಕಳೆದ 2 ಆರ್ಥಿಕ ವರ್ಷದಿಂದ ತಾ.ಪಂ ಗೆ ಬಂದಿರುವ ಅನುದಾನದ ಬಳಕೆಯಾಗದೆ ಉಳಿದಿರುವ ಕುರಿತು ಪ್ರಾಸ್ತಾಪಿಸಿದ ಜಿಲ್ಲಾಧಿಕಾರಿಯವರಿಗೆ ತಾ.ಪಂ ಅಧಿಕಾರಿಗಳು ಅನುದಾನ ಬಳಕೆಯಾಗದೆ ಇರುವ ಕುರಿತಾದ ತಾಂತ್ರಿಕ ಕಾರಣಗಳನ್ನು ಹೇಳಿದರು. ಈ ವೇಳೆ ಮದ್ಯ ಪ್ರವೇಶಿಸಿದ ಉಸ್ತುವಾರಿ ಸಚಿವರು ಕ್ರೀಯಾ ಯೋಜನೆಯನ್ನು ಸಿದ್ದಪಡಿಸಲು ಸೆಪ್ಟಂಬರ್ ತಿಂಗಳ ಒಳಗೆ ಯಾಕೆ ಕಾಯಬೇಕು ಎಂದು ಪ್ರಶ್ನಿಸಿದರಲ್ಲದೆ, ಬಾಕಿ ಉಳಿದಿರುವ ಹಾಗೂ ಪ್ರಗತಿ ಆರ್ಥಿಕ ವರ್ಷದ ಅನುದಾನಗಳನ್ನು ಮಾರ್ಚ್ ತಿಂಗಳ ಮೊದಲೆ ಖರ್ಚು ಮಾಡಲು ಯೋಜನೆ ರೂಪಿಸುವಂತೆ ಸೂಚಿಸಿದರು.
ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ರಸ್ತೆಗಳನ್ನು ಇನ್ನೂ ಮೂರು ತಿಂಗಳ ಒಳಗೆ ದುರಸ್ತಿಗೊಳಿಸಬೇಕು. ರಸ್ತೆ ಬದಿಯ ಗಿಡಗಳನ್ನು ಸ್ವಚ್ಚಗೊಳಿಸಬೇಕು, ಚರಂಡಿಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು. ವಿವಿಧ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದಿಂದ ಅನುಮತಿಗಾಗಿ ತೊಂದರೆಯಾಗುತ್ತಿರುವ ಕುರಿತು ಪ್ರಾಸ್ತಾಪವಾದ ವಿಚಾರಕ್ಕೆ ಪೂರಕವಾಗಿ ಮಾತನಾಡಿದ ಜಿಲ್ಲಾಧಿಕಾರಿಯವರು ಅಭಿವೃದ್ದಿ ಯೋಜನೆಗಳ ಉದ್ದೇಶವನ್ನು ತಿಳಿದುಕೊಂಡು, ಇರುವ ಮಿತಿಯಲ್ಲಿ ನಿಯಮಾವಳಿಗಳ ಸರಳೀಕರಣಕ್ಕೆ ಇಲಾಖೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಎಂಡೋಸಲ್ಫಾನ್ ಪೀಡಿತರ ಸಂಪೂರ್ಣ ಚಿಕಿತ್ಸಾ ವೆಚ್ಚ ಪೂರೈಸಲು ’ನೀರಾಮಯ’ ವಿಮಾ ಯೋಜನೆ ಮಾಡಿಸಲು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಕುಂದಾಪುರ ಪುರಸಭೆಯಲ್ಲಿ ನಿರ್ಮಾಣಗೊಳ್ಳಲಿರುವ ಅಂದಾಜು ೪೮ ಕೋಟಿ ರೂಪಾಯಿಯ ಒಳಚರಂಡಿ ಯೋಜನೆ ಟೆಂಡರ್ ಹಂತದಲ್ಲಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ಸಮೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದಾಗ ಅದಕ್ಕೆ ಪ್ರತಿಸ್ಪಂದಿಸಿದ ಸಚಿವರು ಹಾಗೂ ಡಿ.ಸಿ ಯವರು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಭೂಸ್ವಾಧೀನ ನಡೆಸಿ ಹಾಗೂ ಆದಷ್ಟು ಜಾಗದ ಮಾಲಿಕರೊಂದಿಗೆ ನೇರ ಮಾತುಕತೆ ನಡೆಸಿ ಪರಿಹಾರ ನೀಡಿ ಸ್ವಾಧೀನ ಪ್ರಕ್ರಿಯೆ ಪೂರೈಸುವಂತೆ ಸೂಚಿಸಿದರು.

ಬಾಕಿ ಉಳಿದಿರುವ ವಿದ್ಯುತ್ ಯೋಜನೆಗಳ ಶೀಘ್ರ ಅನುಷ್ಠಾನ. ಬಾಕಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಪರಿಹಾರ ಹಂಚಿಕೆಗೆ ಕ್ರಮ. ಬಾಕಿ ಉಳಿದಿರುವ ನೀರು ಸರಬರಾಜು ವಾಹನಗಳ ಬಿಲ್ಲು ಪಾವತಿಗೆ ಪ್ರಾಸ್ತಾಪ. ಕೃಷಿಕರಿಗೆ ಮಣ್ಣು ಗುಣಮಟ್ಟದ ಕಾರ್ಡ್ ವಿತರಣೆ ಕ್ರಮ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಸಮಸ್ಯೆಯ ನಿವಾರಣೆಗೆ ಆದ್ಯತೆ. ಕನಿಷ್ಠ ೧೫ ದಿನಗಳಿಗೊಮ್ಮೆ ತಾಲ್ಲೂಕು ಆಸ್ಪತ್ರೆಗೆ ವಿಕಲ ಚೇತನರ ತಪಾಸಣೆಗಾಗಿ ತಜ್ಷ ವೈದ್ಯರು ಬರಲು ಕ್ರಮ ಸೇರಿದಂತೆ ವಿವಿಧ ಇಲಾಖೆಗಳ ಹಲವು ವಿಚಾರಗಳು ಸಭೆಯಲ್ಲಿ ಚರ್ಚೆಗೆ ಒಳಗಾಯಿತು.

ಸಭೆಯ ಕೊನೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಅವರು ಕೆಡಿಪಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಮುಂದಿನ ಸಭೆಯಲ್ಲಿ ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ತಾಲ್ಲೂಕು ಕೆಡಿಪಿ ಸಭೆಯಲ್ಲಿ ಅನೇಕ ಪ್ರಮುಖ ಇಲಾಖೆಯ ಅಧಿಕಾರಿಗಳ ಅನುಪಸ್ಥಿತಿ ಕಾಣುತ್ತಿದೆ. ಇಲ್ಲಿಗೆ ಬಾರದ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಹೋಗುತ್ತಾರೆಯೇ ಎನ್ನುವ ನಂಬಿಕೆ ತನಗೆ ಇಲ್ಲದೆ ಇರುವುದರಿಂದ ಸಭೆಗೆ ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸು ನೀಡಲು ಸೂಚಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗನಗವಲ್ಲಿ, ಉಪವಿಭಾಗಾಧಿಕಾರಿ ಚಾರುಲತಾ ಇದ್ದರು.

Write A Comment