ಕನ್ನಡ ವಾರ್ತೆಗಳು

ಕಾಮಗಾರಿಗಳಲ್ಲಿ ಗುಣಮಟ್ಟ ಹಾಗೂ ಪಾರದರ್ಶಕತೆ ಕಾಪಾಡಿ – ಸೊರಕೆ

Pinterest LinkedIn Tumblr

Minister_Vinaya Kumar_Sorake

ಉಡುಪಿ: ಜಿಲ್ಲೆಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಲಾಗಿದ್ದು, ಎಲ್ಲಾ ಕಾಮಗಾರಿಗಳ ಸಂಪೂರ್ಣ ವಿವರ, ಗುತ್ತಿಗೆದಾರರ ಹೆಸರು, ವಿಳಾಸಗಳನ್ನು ಕಾಮಗಾರಿಗಳ ಪ್ರಾರಂಭದ ನಾಮಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದು ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ರವರು ಹೇಳಿದ್ದಾರೆ.

ಅವರು ಇಂದು ಉದ್ಯಾವರದ ಬಿಲ್ಲವ ಮಹಾಜನ ಸೇವಾ ಸಂಘದಲ್ಲಿ ನಡೆದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಇಲಾಖಾವತಿಯಿಂದ ವಿವಿಧ ಸವಲತ್ತು ವಿತರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕಳೆದ ಒಂದು ವರ್ಷ 5 ತಿಂಗಳಲ್ಲಿ ರೂ.7.70 ಕೋಟಿ ಗಳ ಕಾಮಗಾರಿ ಮಂಜೂರಾತಿಯನ್ನು ನೀಡಲಾಗಿದ್ದು, ಉದ್ಯಾವರ ಗ್ರಾಮ ಪಂಚಾಯತ್ ಜನತೆಯ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಬದ್ಧವಾಗಿದ್ದು ಅಭಿವೃದ್ಧಿ ಸರ್ಕಾರದ ಮಂತ್ರವಾಗಿದೆ ಎಂದು ಅವರು ಹೇಳಿದರು.

ಉದ್ಯಾವರ ಗ್ರಾಮ ಪಂಚಾಯತ್‌ನ್ನು ಉಡುಪಿ ನಗರಸಭಾ ವ್ಯಾಪ್ತಿಗೆ ಸೇರಿಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಆದಷ್ಟು ಶೀಘ್ರದಲ್ಲಿ ನಗರಸಬೇಗೆ ಸೇರಿಸಲಾಗುವುದು ನಂತರದಲ್ಲಿ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಭಾಗದ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅನ್ನಭಾಗ್ಯ ಯೋಜನೆಯ ಮೂಲಕ ಬಡ ಜನತೆಯ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದ್ದು, ಎಪಿಲ್ ಕಾಡ್ ನವರಿಗೆ ಸಹ ಪಡಿತರ ವಿತರಿಸಲು ನಿರ್ಧರಿಸಲಾಗಿದೆ ಎಂದ ಸಚಿವರು, ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್‌ಗಳ ಮೂಲಕ ರೈತರ ಮತ್ತು ಸಾರ್ವಜನಿಕರ ಹಲವು ವರ್ಷಗಳಿಂದ ಬಾಕಿ ಇದ್ದ ತಿದ್ದುಪಡಿ ಮತ್ತು ಮಂಜೂರಾತಿಯ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ನೀಡಲು ನಿರ್ಧರಿಸಲಾಗಿದ್ದು, ಸ್ತ್ರೀಶಕ್ತಿ ಸಂಘಗಳಿಗೆ ನೀಡಲಾಗುತ್ತಿದ್ದ ಸಾಲವನ್ನು ರೂ.3 ಲಕ್ಷದ ವರೆಗೆ ಹಾಗೂ ಸುತ್ತು ನಿಧಿಯನ್ನು ರೂ.20 ಸಾವಿರಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಸಚಿವರು ಸವಲತ್ತುಗಳನ್ನು ವಿತರಿಸಿದರು. ಉದ್ಯಾವರ ಗ್ರಾ.ಪಂ. ಅಧ್ಯಕ್ಷ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಗಣೇಶ್ ಕುಮಾರ್, ಕೋಟೆ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಜಿ.ಪಂ. ಸದಸ್ಯ ದಿವಾಕರ ಕುಂದರ್, ತಾ.ಪಂ. ಸದಸ್ಯ ಗಿರೀಶ್ ಕುಮಾರ್, ಕುಸುಮಾ ಮತ್ತಿತರರು ಉಪಸ್ಥಿತರಿದ್ದರು. ತಹಸೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿದರು.

Write A Comment