ಕನ್ನಡ ವಾರ್ತೆಗಳು

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಗೆ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ

Pinterest LinkedIn Tumblr

Gangolli_Sahakara_Sangha

ಕುಂದಾಪುರ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ನೀಡಲಾಗುವ ರಾಜ್ಯದ ಐದು ಉತ್ತಮ ಸೌಹಾರ್ದ ಸಹಕಾರ ಸಂಸ್ಥೆಗಳ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿ. ಆಯ್ಕೆಗೊಂಡಿದೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇವರ ನೇತೃತ್ವದಲ್ಲಿ ಬೆಳಗಾವಿಯ ಎಲ್ಲಾ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನ.20 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಲಿರುವ 61 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ರಾಜ್ಯಪಾಲ ವಜುಬಾಯಿ ವಾಲಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಗಂಗೊಳ್ಳಿಯ ಜನತೆಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ನೀಡಿದ ಅನನ್ಯ ಕೊಡುಗೆಗಳಲ್ಲೊಂದು ಗಂಗೊಳ್ಳಿ ಕೋ-ಆಪರೇಟಿವ ಟೌನ್ ಬ್ಯಾಂಕ್. ಕಡಲ ತೀರದ ಪರಶುರಾಮ ಕ್ಷೇತ್ರ ಗಂಗೊಳ್ಳಿಯ ಭೀಷ್ಮ ದಿವಂಗತ ಎಚ್. ಲಕ್ಷ್ಮೀನಾರಾಯಣ ಕಾಮತರ ಪಡಸಾಲೆಯಲ್ಲಿ 1920 ರ ನವೆಂಬರ್ 22 ರಂದು ನಡೆದ ಸಹಕಾರಿಗಳ ಸಭೆಯಲ್ಲಿ ಜನಿಸಿದ ಈ ಸಂಸ್ಥೆ ಜಿ.ಎಸ್.ಬಿ. ಸಮಾಜದ ಆರ್ಥಿಕ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

1999 ರಲ್ಲಿ ಕೇವಲ ೩೦ ಸಾವಿರ ರೂ. ಗಳಿದ್ದ ಪಾಲು ಭಂಡವಾಳ ಇಂದು ರೂಪಾಯಿ 1.45 ಕೋಟಿಯನ್ನು ದಾಟಿದೆ. ಶೂನ್ಯವಾಗಿದ್ದ ಠೇವಣಿ ಇಂದು 23 ಕೋಟಿ ದಾಟಿದೆ. ಕೇವಲ ರೂಪಾಯಿ 34 ಸಾವಿರವಿದ್ದ ಹೊರಬಾಕಿ ಸಾಲ ಇಂದು 18 ಕೋಟಿ ದಾಟಿದ್ದು ಇದರಲ್ಲಿ ರೂಪಾಯಿ 14 ಕೋಟಿ ಚಿನ್ನಾಭರಣ ಸಾಲವಿರುವುದು ಸಹಕಾರಿಯ ವಿಶೇಷ. ಅಂದು ಕೇವಲ 21 ಸಾವಿರವಿದ್ದ ನಿವ್ವಳ ಲಾಭ ಇಂದು 45 ಲಕ್ಷವನ್ನು ದಾಟಿದೆ. 37 ಸಾವಿರ ರೂ. ಗಳಿದ್ದ ನಿಧಿಗಳು 91.50 ಕೋಟಿಯನ್ನು ದಾಟಿವೆ. ಶೂನ್ಯವಾಗಿದ್ದ ಹೂಡಿಕೆಗಳು ಇಂದು 9 ಕೋಟಿಯನ್ನು ದಾಟಿವೆ. ಈ ಎಲ್ಲಾ ಸಾಧನೆಗಳ ಹಿಂದೆ ಆಡಳಿತ ಮಂಡಳಿ ಸದಸ್ಯರ ಮಾರ್ಗದರ್ಶನ, ದೂರದರ್ಶಿತ್ವ, ಶ್ರಮ ಹಾಗೂ ಹೋರಾಟ ಮತ್ತು ಸಿಬ್ಬಂದಿಗಳ ಸೇವಾ ಮನೋಭಾವ, ಸದಸ್ಯರ ಸಹಕಾರ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ತನ್ನ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಕೋಟೇಶ್ವರ ಹಾಗೂ ಉಪ್ಪುಂದ ಪರಿಸರದಲ್ಲಿ ಸಹಕಾರಿಯ ಶಾಖೆಯನ್ನು ತೆರೆಯಲು ಸಿದ್ಧತೆ ಆರಂಭಿಸಿರುವುದು ಸಹಕಾರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಸಹಕಾರಿಯ ವಿಶೇಷತೆಗಳು : 1600 ಚದರ ಅಡಿಯ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಣೆ, 100ಕ್ಕೂ ಅಧಿಕ ಭದ್ರತಾ ಕೋಶಗಳ ಅಳವಡಿಕೆ, ಸಂಪೂರ್ಣ ಗಣಕೀಕೃತ ಲೆಕ್ಕ ಪತ್ರ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಿಂಪ್ಯೂಟರ್ ಮೂಲಕ ಪಿಗ್ಮಿ ಸಂಗ್ರಹ, ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ನಿರಂತರ ಬ್ಯಾಂಕಿಂಗ್ ಸೇವೆ, ಪಾರದರ್ಶಕ ಆಡಳಿತ, ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಚಿನ್ನಾಭರಣ ಸಾಲ, ಕ್ಷಣ ಮಾತ್ರದಲ್ಲಿ ವಾಹನ ಖರೀದಿ ಸಾಲ, ಪಿಗ್ಮಿ ಮೂಲಕ ಸಾಲ ಮರುಪಾವತಿ ಸೌಲಭ್ಯ, ಮೀಟಿಂಗ್ ಭತ್ಯೆ ಇತ್ಯಾದಿ ಯಾವುದೆ ವೆಚ್ಚವನ್ನು ಸಂಸ್ಥೆಗೆ ಭರಿಸದೆ ಇತರ ಸಂಘಗಳಿಗೆ ಮಾದರಿಯಾಗಿರುವ ಆಡಳಿತ ಮಂಡಳಿ, ಆರಂಭದಿಂದಲೂ ಪ್ರತಿ ವರ್ಷ ಸದಸ್ಯರಿಗೆ ಡಿವಿಡೆಂಡ ಪಾವತಿ, ಸಾರ್ವಜನಿಕ ಉಪಕಾರ ನಿಧಿಯಿಂದ ಸಮುದಾಯಕ್ಕೆ ನಿರಂತರ ಕೊಡುಗೆ, ಜನರ ಅನುಕೂಲಕ್ಕಾಗಿ ಇ-ಸ್ಟ್ಯಾಂಪಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಗ್ರಾಹಜರಿಗೆ ನೀಡುವ ಮೂಲಕ ಜನಮನ ಗೆದ್ದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಗೆ ಆಯ್ಕೆಗೊಂಡಿರುವುದು ಗಂಗೊಳ್ಳಿಗೆ ಹೆಮ್ಮೆಯ ಹಾಗೂ ಸಂತಸ ವಿಚಾರವಾಗಿದೆ.

Write A Comment