ಕನ್ನಡ ವಾರ್ತೆಗಳು

ಪಡೀಲ್‌ : ವೃದ್ಧೆಯನ್ನು ಅತ್ಯಾಚಾರ ಮಾಡಿದ ಅಪರಾಧಿ ನಾಗೇಶ್‌‌ನಿಗೆ ಜೀವಾವಧಿ ಶಿಕ್ಷೆ ಪ್ರಕಟ

Pinterest LinkedIn Tumblr

Nagesh_Rape_accsed

ಮಂಗಳೂರು: ಪಡೀಲ್‌ ಸಮೀಪದ ಅಳಪೆ ಗ್ರಾಮದ 69 ವರ್ಷ ವಯಸ್ಸಿನ ವೃದ್ಧೆಯ ಮೇಲೆ ವರ್ಷದ ಹಿಂದೆ ಸಂಭವಿಸಿದ ಅತ್ಯಾಚಾರ ಪ್ರಕರಣದ ಅಪರಾಧಿ ನಾಗೇಶ್‌ (25) ಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಹಾಗೂ ಅತ್ಯಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನೆಯ ವಿವರ :

ಅಳಪೆ ಗ್ರಾಮದ ಈ ವೃದ್ಧ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಇಬ್ಬರು ಹೆಮ್ಮಕ್ಕಳು ಮದುವೆಯಾಗಿ ವಿದೇಶದಲ್ಲಿದ್ದಾರೆ. ಇಬ್ಬರು ಗಂಡು ಮಕ್ಕಳು ಊರಿನಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ವಿದೇಶದಲ್ಲಿರುವ ಓರ್ವ ಪುತ್ರಿ ಈಕೆಯ ಮನೆಯ ಪಕ್ಕದಲ್ಲಿ ಮನೆ ಕಟ್ಟಿಸುತ್ತಿದ್ದು, ಅದರ ಗುತ್ತಿಗೆಯನ್ನು ಬಜಾಲ್‌ನ ವ್ಯಕ್ತಿಯೊಬ್ಬರು ವಹಿಸಿಕೊಂಡಿದ್ದರು. ಕಟ್ಟಡದ ಕೆಲಸ ನಿರ್ವಹಿಸಲು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ನಾಗೇಶ್‌ ಈ ವೃದ್ಧೆಯ ಮನೆಯ ಹಿಂಭಾಗದ ಶೆಡ್‌ನ‌ಲ್ಲಿ ವಾಸ್ತವ್ಯ ಮಾಡುತ್ತಿದ್ದನು. 2013ರ ಜು. 14 ರಂದು (ರವಿವಾರ) ಸಂಜೆ 7.15 ಗಂಟೆ ವೇಳೆಗೆ ವೃದ್ಧ ಮಹಿಳೆ ತನ್ನ ಮನೆಯಲ್ಲಿ ಜಪ ಮಾಡುತ್ತಿದ್ದ ಸಮಯದಲ್ಲಿ ನಾಗೇಶನು ಆಕೆಯ ಮನೆಯ ಹಿಂಬದಿಯ ಬಾಗಿಲನ್ನು ತಟ್ಟಿ “ಅಜ್ಜೀ’ ಎಂದು ಕರೆದಾಗ ಆಕೆ ಹೋಗಿ ಬಾಗಿಲು ತೆರೆದಿದ್ದಾರೆ.

ನಾಗೇಶ ಕತ್ತಿಯನ್ನು ಹಿಡಿದು ಮನೆಯ ಒಳಗೆ ಪ್ರವೇಶಿಸಿ ಆಕೆ ಧರಿಸಿದ್ದ ನೈಟಿಯ ಕಾಲರ್‌ ಹಿಡಿದು ಕತ್ತಿ ತೋರಿಸಿ ಕಡಿಯುವುದಾಗಿ ಬೆದರಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಗ ಆಕೆ “ನಾನು ಪ್ರಾಯದವಳು. ನನಗೆ ಈ ರೀತಿ ಮಾಡಬೇಡ. ನನಗೆ ನಿನ್ನ ಪ್ರಾಯಕ್ಕಿಂತ ದೊಡ್ಡ ಮಕ್ಕಳಿದ್ದಾರೆ. ಅಲ್ಲದೆ ನನಗೆ ಮೈ ಹುಷಾರಿಲ್ಲ’ ಎಂದು ಬೇಡಿಕೊಂಡಿದ್ದರೂ ನಾಗೇಶ ಯಾವುದೇ ಕರುಣೆಯನ್ನು ತೋರಿಸದೆ ಆಕೆಯನ್ನು ಬಲಾತ್ಕಾರವಾಗಿ ಮಂಚದ ಮೇಲೆ ಮಲಗಿಸಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಆಕೆಯ ಮುಖ ಮತ್ತು ತುಟಿಗೆ ಕಚ್ಚಿ ಗಾಯಗೊಳಿಸಿದ್ದನು. ಬಳಿಕ ಕಪಾಟಿನಲ್ಲಿದ್ದ 50,000 ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 5,500 ರೂ. ನಗದು ಸುಲಿಗೆ ಮಾಡಿಕೊಂಡು ಮನೆಯಿಂದ ಓಡಿ ಹೋಗಿದ್ದ. ಅಷ್ಟರಲ್ಲಿ ವೃದ್ಧ ಮಹಿಳೆ ತುಂಡು ಬಟ್ಟೆಯನ್ನು ಧರಿಸಿ ಮನೆಯಿಂದ ಹೊರಗೆ ಓಡಿ ಬಂದು ಬೊಬ್ಬೆ ಹಾಕಿದಾಗ ಅಕ್ಕಪಕ್ಕದ ಮನೆಗಳ ಮಂದಿ ಓಡಿ ಬಂದು ನಾಗೇಶನನ್ನು ಹಿಡಿಯಲು ಯತ್ನಿಸಿದ್ದರು. ಆದರೆ ಆತ ಪಕ್ಕದ ಕಾಡಿಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದನು.

ರಾತ್ರಿಯಿಡೀ ಕಾರ್ಯಾಚರಣೆ :

ಬಳಿಕ ಮಹಿಳೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದು, ರಾತ್ರಿಯಿಡೀ ಪೊಲೀಸರು ಮತ್ತು ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಆರೋಪಿಯ ಪತ್ತೆಗೆ ಪ್ರಯತ್ನಿಸಿದ್ದರು. ಮುಂಜಾನೆ 4 ಗಂಟೆ ವೇಳೆಗೆ ನಾಗೇಶನು ದೊಡ್ಡ ಬಂಡೆ ಕಲ್ಲಿನ ಮೇಲೆ ಮಲಗಿರುವುದು ಕಂಡು ಬಂದಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಆತನ ವಶದಲ್ಲಿದ್ದ ಮಹಿಳೆಗೆ ಸಂಬಂಧಪಟ್ಟ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಿ ಬಂಧಿಸಿದ್ದರು. ಇನ್‌ಸ್ಪೆಕ್ಟರ್‌ ರವೀಶ್‌ ನಾಯಕ್‌ ತನಿಖೆ ನಡೆಸಿ ಆತನ ವಿರುದ್ಧ ವೃದ್ಧೆಯ ಮನೆಗೆ ಅಕ್ರಮ ಪ್ರವೇಶ ಮಾಡಿದ ಬಗ್ಗೆ, ಕತ್ತಿ ತೋರಿಸಿ ಜೀವ ಬೆದರಿಕೆ ಹಾಕಿದ ಕುರಿತು, ಅತ್ಯಾಚಾರ ಮಾಡಿದ ಬಗ್ಗೆ ಹಾಗೂ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ ಬಗ್ಗೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಬಳಿಕ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಹಾಗೂ ಅತ್ಯಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಒಟ್ಟು 21 ಸಾಕ್ಷಿಗಳನ್ನು ವಿಚಾರಣೆಗೆ ಒಳ ಪಡಿಸಲಾಗಿತ್ತು. ನ. 14ರಂದು ಆರೋಪಿ ಪರ ಮತ್ತು ಪ್ರಾಸಿಕ್ಯೂಶನ್‌ ಪರ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಪುಷ್ಪಾಂಜಲಿ ದೇವಿ ಅವರು ಆರೋಪಿಯ ಮೇಲಣ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿ ನಾಗೇಶ ತಪ್ಪಿತಸ್ಥ ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಕಟನೆಯನ್ನು ನ. 18ಕ್ಕೆ ಕಾದಿರಿಸಿದ್ದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಿವಪ್ರಸಾದ್‌ ಆಳ್ವ ಕೆ. ಅವರು ಈ ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ಆರೋಪಿ ನಾಗೇಶ ಆರೋಪವನ್ನು ನಿರಾಕರಿಸಿ “ತಾನು ಈ ವೃದ್ಧ ಮಹಿಳೆಗೆ 10,000 ರೂ. ನೀಡಿದ್ದು, ಅದನ್ನು ವಾಪಸ್‌ ಕೊಡುವಂತೆ ಕೇಳಿಕೊಂಡಾಗ ಆಕೆ ತನ್ನ ಮೇಲೆ ಈ ರೀತಿ ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದನು. ಆದರೆ ಇದಕ್ಕೆ ಸಾಕಷ್ಟು ಪುರಾವೆಗಳು ಇಲ್ಲದ ಕಾರಣ ನ್ಯಾಯಾಧೀಶರು ಆತನ ವಾದಕ್ಕೆ ಮನ್ನಣೆ ನೀಡಿಲ್ಲ

Write A Comment