ಮೂಡುಬಿದಿರೆ (ರತ್ನಾಕರವರ್ಣಿ ವೇದಿಕೆ), ನ.15: ವಿದ್ಯಾಗಿರಿಯ ವಿದ್ವಾನ್ ಕಾಂತ ರೈ ದ್ವಾರದ ರಾಣಿ ಅಬ್ಬಕ್ಕ ಚಾವಡಿ, ಮಂದಾರ ಕೇಶವ ಭಟ್ಟ ಸಭಾಂಗಣದಲ್ಲಿ ಕರ್ನಾಟಕ ತುಳು ಅಕಾಡಮಿಯ ಸಹಕಾರದೊಂದಿಗೆ ತುಳು ಭಾಷೆ, ಸಂಸ್ಕೃತಿಯ ಉತ್ಸವ ‘ಆಳ್ವಾಸ್ ತುಳುಸಿರಿ 2014’ ಶುಕ್ರವಾರ ಮುಸ್ಸಂಜೆ ನಡೆಯಿತು.ತುಳು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ತಂಡಗಳ ಮೆರವಣಿಗೆಯ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತುಳುಸಿರಿ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತುಳು ಸಮಾನ ಸಂಸ್ಕೃತಿಯ ಜತೆಗೆ ಮೂಲ ಸಂಸ್ಕೃತಿಯನ್ನು ಉಳಿಸಿ ಕೊಂಡಿರುವ ಭಾಷೆಯಾಗಿದೆ. ನಮ್ಮ ಹೃದಯದಲ್ಲಿ ತುಳು ಭಾಷೆ, ನಡವಳಿಕೆಯ ಬಗ್ಗೆ ನಾವು ತುಳುವರು ಎಂಬ ಭಾವನೆ ನಮ್ಮ ಹೃದಯದಲ್ಲಿದ್ದರೂ ನಮ್ಮ ಸಂಸ್ಕೃತಿ, ರಾಜ್ಯ, ಅಂತಾರಾಜ್ಯ, ರಾಷ್ಟ್ರದ ಇತರ ಭಾಷೆಗಳ ಜತೆಗೆ ಬೆರೆಕೆಯಾಗುತ್ತಿರುವುದರಿಂದ ನಮ್ಮ ಭಾಷೆ ಎಲ್ಲಿಯೋ ತೇಲಿ ಹೋಗುತ್ತಿದೆ. ಆದ್ದರಿಂದ ನಮ್ಮ ಸಂಸ್ಕಾರ ಸಂಸ್ಕೃತಿ, ವಿಭಿನ್ನತೆಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ. ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಶುಭ ಹಾರೈಸಿದರು. ಸನ್ಮಾನ: ತುಳುನಾಡಿನ ಭಾಷೆ-ಸಂಸ್ಕೃತಿಯ ಪ್ರಸರಣಕ್ಕೆ ದುಡಿದ ಹನ್ನೆರಡು ಸಾಧಕರಿಗೆ ಇದೇ ಸಂದರ್ಭ ‘ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿ ಸಲಾಯಿತು. ಹಿರಿಯ ಸಂಶೋಧಕ ಡಾ.ಬಿ.ಎ. ವಿವೇಕ ರೈ ಆಶಯ ಭಾಷಣ ಮಾಡಿದರು. ಡಾ.ಗಣೇಶ ಅಮೀನ್ ಸಂಕಮಾರ್ ದಿಕ್ಸೂಚಿ ಭಾಷಣ ಮಾಡಿದರು.
ಸಚಿವರಾದ ಕೆ.ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಪುತ್ತಿಗೆ ಗ್ರಾಪಂ ಅಧ್ಯಕ್ಷ ಉಮಾನಾಥ ಕರ್ಕೇರ, ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕುಲದೀಪ್ ಎಂ., ಅಂಬಾತನಯ ಮುದ್ರಾಡಿ, ರಾಮಚಂದ್ರ ಮಿಜಾರು, ತುಳುಕೂಟ ಮಂಗಳೂರಿನ ಅಧ್ಯಕ್ಷ ದಾಮೋದರ ನಿಸರ್ಗ, ಬೆದ್ರ ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ಅಣ್ಣಯ್ಯ ಸೇರಿಗಾರ, ಕರ್ನಾಟಕ ದೈವ ನರ್ತಕ ಸಂಘದ ಅಧ್ಯಕ್ಷ ಸರಪಾಡಿ ದೇಜಪ್ಪ, ನಲಿಕೆ ಯಾನೆ ಪಾಣರ ಸಂಘದ ಅಧ್ಯಕ್ಷ ಎಂ.ಡಿ.ವೆಂಕಪ್ಪ, ರಾಜನ್ ದೈವ ನೇಮದ ದಶ್ಕ ಭಾಸ್ಕರ ಬಂಗೇರ, ಕೊರಗ ಸಂಘದ ಅಧ್ಯಕ್ಷ ಮತ್ತಾಯಿ ಕಾಯರ್‌ಪಲ್ಕೆ, ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಸಂಜೀವ ಮಲೆಕುಡಿಯ ಕೊಯ್ಯೂರು ಮತ್ತಿತರರು ಅತಿಥಿ ಗಳಾಗಿ ಭಾಗವಹಿಸಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ , ಕಾರ್ಯ ಕ್ರಮ ಸಂಘಟಕ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು. ಉಪನ್ಯಾಸಕ ವೇಣುಗೋಪಾಲ ಸನ್ಮಾನಿತರನ್ನು ಪರಿಚಯಿಸಿದರು. ಕೆ.ಕೆ.ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಯೋಗೀಶ್ ಕೈರೋಡಿ ವಂದಿಸಿದರು.