ಕರಾವಳಿ

ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ‌ ನಿಯೋಗ

Pinterest LinkedIn Tumblr

ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ  ಆರ್.ಮಂಜುನಾಥ್ ಹಾಗೂ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿತು.

ಗುತ್ತಿಗೆದಾರರ ಬೇಡಿಕೆಗಳೇನು?: 06.03.2026 ರಂದು ಪ್ರೀಡಂ ಪಾರ್ಕ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಮುಷ್ಕರ ಪ್ರತಿಭಟನೆ ಸಮಯದಲ್ಲಿ  ಲೋಕೋಪಯೋಗಿ ಇಲಾಖೆ ಸಚಿವರು, ಸಣ್ಣ ನೀರಾವರಿ ಸಚಿವರು, ಖುದ್ದಾಗಿ ಸ್ಥಳಕ್ಕೆ ಬಂದು ನೆರೆದಿರುವ ಬೃಹತ್ ಜನಸ್ತೋಮಕ್ಕೆ, ಸರ್ಕಾರ ನಿಮ್ಮ ಜೊತೆ ಸದಾ ಇರುತ್ತದೆ, ನಿಮ್ಮಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿರುತ್ತದೆ, ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮತ್ತು ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆಂದು ಆಶ್ವಾಸನೆ ಮತ್ತು ಅಭಯ ಹಸ್ತ ನೀಡಿದ್ದು ಇದೀಗಾ ತಾವು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ದಿನಾಂಕ 30.06.2026 ರಂದು ರಾಜ್ಯ ಸಂಘದ ಪದಾಧಿಕಾರಿಗಳನ್ನು ಕರೆದು ಚರ್ಚಿಸಿ ನಿಮ್ಮ ಹಣವನ್ನು ಎರಡು ತಿಂಗಳು ಒಳಗಾಗಿ ನೀಡುತ್ತೇವೆ ಎಂದು, ಅದಕ್ಕೆ ಸಂಬಂದಪಟ್ಟ ಹಣಕಾಸು ವ್ಯವಸ್ಥೆಯನ್ನು ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ತಿಳಿಸಿರುತ್ತೇನೆಂದು ಭರವಸೆ ನೀಡಿದ್ದೀರಿ.

ತಾವುಗಳು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಆಯಾ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನ ನಡೆಸುತ್ತಿದ್ದೀರಿ. ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಮೂಲ ಕಾರಣಕರ್ತರಾದ ಕರ್ನಾಟಕ ರಾಜ್ಯದ ಗುತ್ತಿಗೆದಾರರನ್ನೆ ಮರೆತಿದ್ದೀರಿ. ತಾವುಗಳು ಎಲ್ಲಾ ಕಡೆ “ನುಡಿದಂತೆ ನಡೆದ ಮುಖ್ಯಮಂತ್ರಿ ಮತ್ತು ಸರ್ಕಾರ ಭಾವನೆ ಮತ್ತು ಬದುಕು’ ಎಂದು ಘೋಷಣೆ ಮಾಡುತ್ತಾ ಬಂದಿರದ್ದು ಇಡೀ ಕರ್ನಾಟಕದಲ್ಲಿ ಸುಮಾರು 1,50,000 ಗುತ್ತಿಗೆದಾರರು ಮತ್ತು ಅವಲಂಬಿತರು ತಮ್ಮ ಮೇಲೆ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದ್ದೇವೆ.

ಕರ್ನಾಟಕ ಸರ್ಕಾರದಲ್ಲಿ ಅಭಿವೃದ್ಧಿ ಇಲಾಖೆಗಳಿಂದ ಒಟ್ಟು ಸುಮಾರು ರೂ.38,000.00 ಕೋಟಿ ಮೊತ್ತವು ಬಾಕಿ ಇರುತ್ತದೆ. 2021-22ರಿಂದ ಇಲ್ಲಿಯವರೆಗೂ ಗುತ್ತಿಗೆದಾರರ ಬಾಕಿ ಹಣವು ಇಲಾಖೆಗಳಲ್ಲಿ ಬಿಡುಗಡೆಯಾಗಿರುವುದಿಲ್ಲ. ಲೋಕೋಪಯೋಗಿ ಇಲಾಖೆ ಮತ್ತು ಜಿ.ಬಿ.ಎ. (ಬೆಂಗಳೂರು ಮಹಾನಗರ ಪಾಲಿಕೆ)ನಲ್ಲಿ ಹೊರತು ಪಡಿಸಿ ಇತರೇ ಬೇರೆ ಯಾವುದೇ ಇಲಾಖೆಗಳು ಟೆಂಡ‌ರ್ ಮತ್ತು ಹಣ ಬಿಡುಗಡೆ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಮಾನ್ಯ – ಮುಖ್ಯಮಂತ್ರಿಗಳ ಭರವಸೆ ಪ್ರಕಾರ ಬಾಕಿ ಇರುವ ರೂ.38,000.00 ಕೋಟಿ ಮೊತ್ತವನ್ನು ಸರ್ಕಾರ ತುರ್ತಾಗಿ ಬಿಡುಗಡೆ ಮಾಡಲು ಕ್ರಮವಹಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಅನುದಾನವಿಲ್ಲದ ಕಾಮಗಾರಿಗಳಿಗೆ, ಇಲಾಖೆಗಳಲ್ಲಿ ಟೆಂಡರ್‌ಗಳನ್ನು ಕರೆಯುವುದನ್ನು ತುರ್ತಾಗಿ ನಿಲ್ಲಿಸಬೇಕು. ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಈ ಸರ್ಕಾರ ಮಾಡಬಾರದೆಂದು, ಈಗಾಗಲೇ ಸಂಕಷ್ಟದಲ್ಲಿರುವ ಗುತ್ತಿಗೆದಾರರನ್ನು ಇನ್ನಷ್ಟು ಸಮಸ್ಯೆಗೆ ಸಿಲುಕಿಸಬಾರದೆಂದು, ಬಾಕಿ ಇರುವ ಹಣ ಪಾವತಿ ಮಾಡಿದ ನಂತರವೇ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು.

ಕರ್ನಾಟಕ ರಾಜ್ಯದ ಯಾವ ಇಲಾಖೆಗಳಲ್ಲಿ ಪಾರದರ್ಶಕತೆ ಕಾಪಾಡುತ್ತಿಲ್ಲ, ಆದ್ದರಿಂದ ಇಲಾಖೆಯಲ್ಲಿ ಜೇಷ್ಠತೆ ಕಾಪಾಡಿ, ಅದರ ಪ್ರಕಾರ ಹಣ ಬಿಡುಗಡೆ ಮಾಡಲು ಸೂಕ್ತ ಕ್ರಮ ವಹಿಸುವುದು. Special LOC ಕೊಡುವುದನ್ನು ತಡೆ ಹಿಡಿಯಬೇಕು.

ಎಲ್ಲಾ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಒಟ್ಟಿಗೆ ಸೇರಿಸಿ ಪ್ಯಾಕೇಜ್ ಪದ್ಧತಿಯನ್ನು ತಂದಿರುತ್ತಾರೆ. ಇದರಿಂದ ಸಣ್ಣ ಮತ್ತು ಮಧ್ಯಮವರ್ಗದ ಗುತ್ತಿಗೆದಾರರಿಗೆ ತುಂಬಾ ಅನಾನುಕೂಲವಾಗುತ್ತಿ ರುವುದರಿಂದ ಪ್ಯಾಕೇಜ್ ಪದ್ದತಿಯನ್ನು ರದ್ದುಪಡಿಸಬೇಕೆಂದು ಕೋರಲಾಗುವುದು. ಕರ್ನಾಟಕ ರಾಜ್ಯದ ಶೇಕಡ 70% ಶಾಸಕರು ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಸಕರು ಸ್ಥಳೀಯ ಗುತ್ತಿಗೆದಾರರಿಗೆ ಟೆಂಡ‌ರ್ ನೀಡುವ ವಿಚಾರವಾಗಿ ಆದ್ಯತೆ ನೀಡಬೇಕು. ಈ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳು ತುರ್ತಾಗಿ ಕ್ರಮಕೈಗೊಳ್ಳಬೇಕು.

ಕರ್ನಾಟಕ ರಾಜ್ಯದ ಗುತ್ತಿಗೆದಾರರು ಕೋವಿಡ್-19 ಸಂದರ್ಭದಿಂದ ಮತ್ತು ಸರ್ಕಾದ ಮಟ್ಟದಲ್ಲಿ ಇರುವ ಅವ್ಯವಸ್ಥೆಯಿಂದ ಸಣ್ಣ ಮತ್ತು ಮದ್ಯಮ ವರ್ಗದ ಗುತ್ತಿಗೆದಾರರಿಗೆ ಇಲ್ಲಿಯವರೆಗೂ ಟೆಂಡ‌ರ್ ಕಾಮಗಾರಿಗಳು ಸಿಗುತ್ತಿಲ್ಲ. ಆದ್ದರಿಂದ ಕಾಮಗಾರಿ ಮುಂದುವರೆಸಲು ವರ್ಕ್ ಡನ್ ಮತ್ತು ಟರ್ನ್ ಓವರ್‌ನ್ನು 10 ವರ್ಷಗಳ ಅವದಿವರೆಗೆ ವಿಸ್ತರಿಸುವುದು.

2017-18, 2018-19 ವ್ಯಾಟಿ ನಿಂದ ಜಿ.ಎಸ್.ಟಿ. ವ್ಯತ್ಯಾಸದ ಮೊತ್ತ 8% ನ್ನು ತುರ್ತಾಗಿ ನೀಡಲು ಆರ್ಥಿಕ ಇಲಾಖೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ಶಿಪಾರಸ್ಸು ಮಾಡಿಸಬೇಕು.

ಇ-ಸಂಗ್ರಹಣಾ ವೇದಿಕೆಯ ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರದಿಂದ ಆದೇಶ ಮಾಡಿರುವುದನ್ನು ರದ್ದುಪಡಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡುವ, ಜೆ.ಜೆ.ಎಂ. ಯೋಜನೆ ಅಡಿಯಲ್ಲಿ, ಗುತ್ತಿಗೆದಾರರು ಕಾಮಗಾರಿ ಮುಗಿಸಿದರು, ಅಧಿಕಾರಿಗಳು ಕಾಲವಿಸ್ತರಣೆ ಮಾಡಿ ಕೊಡದೆ, ಅಂತಿಮ ಬಿಲ್‌ನ್ನು ಮಾಡುತ್ತಿಲ್ಲ. ಇದುವರೆವಿಗೂ ಸರ್ಕಾರದಿಂದ ಸಮಪರ್ಕವಾಗಿ ಹಣ ಬಿಡುಗಡೆಯಾಗಿರುವುದಿಲ್ಲ . ಜೆ.ಜೆ.ಎಂ. ಗುತ್ತಿಗೆದಾರರು ತುಂಬಾ ನಷ್ಟವನ್ನು ಅನುಭವವಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಹಣವನ್ನು ನಿರ್ಮಿತಿ ಕೇಂದ್ರ ಕೆ.ಆ‌ರ್.ಐ.ಡಿ.ಎಲ್. (ಲ್ಯಾಂಡ್ ಆರ್ಮಿ) ಹಾಗೂ ಇತರೇ ಸಂಸ್ಥೆಗಳಿಗೆ ನೀಡುತ್ತಿರುವುದರ ಬಗ್ಗೆ, ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಅಧಿಕೃತ ಸಭೆ ಕರೆಯಲು ಮನವಿ.

ಜಿ.ಬಿ.ಎ. ವ್ಯಾಪ್ತಿಯಲ್ಲಿ ಕೆ.ಆರ್.ಡಿ.ಎಲ್.ಮುಂಖಾತರ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಶೇ25% ತಡೆ ಹಿಡಿದಿರುವ ಹಣವನ್ನು ಬಿಡುಗಡೆಗೊಳಿಸುವಂತೆ ಜಿ.ಬಿ.ಎ. ಅಧಿಕಾರಿಗಳಿಗೆ ಆದೇಶ ನೀಡಬೇಕು.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆ ಕಾಮಗಾರಿಗಳನ್ನು ಟೆಂಡ‌ರ್ ಕರೆದು, ರದ್ದುಪಡಿಸಿ, ಸದರಿ ಕಾಮಗಾರಿಗಳನ್ನು 13(ಬಿ) ಅಡಿಯಲ್ಲಿ ಅಧಿಕಾರಿಗಳಿಗೆ ಬೇಕಾದ ಗುತ್ತಿಗೆದಾರರಲ್ಲದವರಿಗೆ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳನ್ನು ಕಾನೂನು ಉಲ್ಲಂಘನೆ ಮಾಡಿ ನೀಡಿರುತ್ತಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ರಾಜ್ಯ ಸಂಘದ ಪದಾಧಿಕಾರಿಗಳ ಸಭೆ ಕರೆಯಲು ಕ್ರಮಕೈಗೊಳ್ಳಬೇಕು.

ತಮ್ಮ ಆರ್ಥಿಕ ಇಲಾಖೆಯಿಂದ ಆದೇಶ ಆಗಬೇಕಾಗಿರುವುದರಿಂದ, ತಾವುಗಳು ಸಂಬಂಧಪಟ್ಟ ಇಲಾಖೆಗಳ ಸಚಿವರು, ಸರ್ಕಾರದ ಕಾರ್ಯದರ್ಶಿಗಳು ಹಾಗೂ ಇತರೆ ಅಧಿಕಾರಿಗಳು ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮನವಿ ಮಾಡಿಕೊಳ್ಳುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.