ಕುಂದಾಪುರ: ಕುಂದಾಪುರ-2 ತಾಲೂಕಿನ ಸಿದ್ಧಾಪುರ ಗ್ರಾಮದ ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರು 1 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾಂತರಿಸಿದರು.

ಯೋಜನಾಧಿಕಾರಿ ಸುಧೀರ್ ಹಂಗಳೂರು ಮಾತನಾಡಿ, ವೀರೇಂದ್ರ ಹೆಗ್ಗಡೆಯವರು ನಮ್ಮ ತಾಲೂಕಿನ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮೋತ್ಥಾನ ಟ್ರಸ್ಟ್ ಮೂಲಕ ದೇಣಿಗೆಯನ್ನು ಒದಗಿಸಿಕೊಡುತ್ತಿದ್ದಾರೆ. ಇದಲ್ಲದೇ ವಾರ್ಷಿಕವಾಗಿ ಎರಡು ಬಾರಿ ಯೋಜನೆಯ ಸದಸ್ಯರ ಹಾಗೂ ಸ್ಥಳೀಯರ ಸಹಕಾರದಿಂದ ಗ್ರಾಮದ ದೇವಸ್ಥಾನದ, ಚರ್ಚ್, ಮಸೀದಿಗಳ ಸ್ವಚ್ಛತೆಯನ್ನು ಮಾಡಲಾಗುತ್ತಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ತಾಲೂಕಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರಗಳಿಗೆ ಕಳೆದ 5 ವರ್ಷಂದೀಚೆಗೆ ಒಟ್ಟು 99 ಲಕ್ಷದ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 42 ನೇ ದೇವಸ್ಥಾನವಾಗಿದೆ ಎಂದರು.
ಈ ಸಂದರ್ಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್. ಶೇಖರ ಶೆಟ್ಟಿ, ಅಧ್ಯಕ್ಷ ಸತೀಶ ಶೆಟ್ಟಿ, ಕಾರ್ಯದರ್ಶಿ ಕೆ.ಸಿ ಭೋಜರಾಜ್ ಶೆಟ್ಟಿ, ಸಿದ್ಧಾಪುರ ಒಕ್ಕೂಟದ ಅಧ್ಯಕ್ಷರಾದ ರೇಖಾ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಗೋಪಾಲ ಕಾಂಚನ್ ಮತ್ತು ಭೋಜರಾಜ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಸಂದೀಪ್ ವಿ. ನಾಯ್ಕ್ ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
Comments are closed.