ಕರಾವಳಿ

ಹುತಾತ್ಮ ವೀರ ಯೋಧ ಅನೂಪ್ ಪೂಜಾರಿಯವರ ಬೀಜಾಡಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

Pinterest LinkedIn Tumblr

(ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ದೇಶ ಸೇವೆಯ ಕರ್ತವ್ಯದಲ್ಲಿರುವಾಗಲೇ ವೀರಮರಣ ಹೊಂದಿದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿಯ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಸ್ಮಾರಕ ನಿರ್ಮಿಸುವ ಭರವಸೆ ಒಂದೂವರೆ ವರ್ಷ ಕಳೆದರೂ ಇನ್ನೂ ನನಸಾಗಿಲ್ಲ. ಯೋಧನ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸ್ಮಾರಕ ನಿರ್ಮಾಣಕ್ಕೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಧೀರ ಯೋಧ ಅನೂಪ್ ಪೂಜಾರಿ (33) ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ್ದರು. ಸೇನೆಗೆ ಸೇರಿ ಭಾರತೀಯ ಸೇನೆಯ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ನಲ್ಲಿ ಲ್ಯಾನ್ಸ್ ಹವಾಲ್ದಾರ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ದೇಶ ಸೇವೆಯ ಕರ್ತವ್ಯದಲ್ಲಿದ್ದಾಗಲೇ 2024 ಡಿಸೆಂಬರ್‌ನಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮದಲ್ಲಿ ನಿವಾಸಕ್ಕೆ ಅನತಿ ದೂರದಲ್ಲಿರುವ ಬೀಜಾಡಿ ಸಮುದ್ರ ತೀರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅಂದು ಸುಮಾರು 30 ಸಾವಿರಕ್ಕೂ ಅಧಿಕ ಜನರು ಅಂತಿಮ ನಮನ ಸಲ್ಲಿಸಿ ಯೋಧನಿಗೆ ಭಾವಪೂರ್ಣ ವಿದಾಯ ಹೇಳಿದ್ದರು. ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರ ಅನೂಪ್ ಪೂಜಾರಿ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವನ್ನು ಅಗಲಿದ್ದರು.

ಯೋಧನ ಸ್ಮಾರಕ ನಿರ್ಮಾಣಕ್ಕಾಗಿ ಸುಮಾರು 50 ಸೆಂಟ್ಸ್ ಭೂಮಿಯನ್ನು ಗುರುತಿಸಿ ನೀಡುವ ಭರವಸೆಯನ್ನು ಈ ಹಿಂದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ್ದರು. ಆದರೆ ಒಂದೂವರೆ ವರ್ಷ ಕಳೆದರೂ ಭೂಮಿ ಗುರುತು ಮಾಡುವ ಕೆಲಸವೇ ಪೂರ್ಣಗೊಂಡಿಲ್ಲ ಎಂಬುದು ಕುಟುಂಬಿಕರು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಮಾರಕ ನಿರ್ಮಾಣದ ಉದ್ದೇಶ: ಸ್ಮಾರಕದ ಜೊತೆಗೆ ಅನೂಪ್ ಪೂಜಾರಿಯ ಪುತ್ಥಳಿ ನಿರ್ಮಿಸಬೇಕೆಂಬ ಬೇಡಿಕೆಯೂ ಸಾರ್ವಜನಿಕರಿಂದ ಕೇಳಿಬಂದಿದೆ. ಪ್ರವಾಸ ನಿಮಿತ್ತ ಈ ಭಾಗಕ್ಕೆ ವಿವಿದೆಡೆಯಿಂದ ಆಗಮಿಸುವ ಪ್ರವಾಸಿಗರಿಗೆ ಹುತಾತ್ಮ ಅನೂಪ್ ಅವರ ದಿಟ್ಟ ಎದೆಗಾರಿಕೆ ಬಗ್ಗೆ ಅರಿವು ಮೂಡಿಸುವುದು, ಸಾವಿರಾರು ಜನರು ಯೋಧನ ತ್ಯಾಗವನ್ನು ಅರಿಯುವ ಅವಕಾಶ ಸಿಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಹುಟ್ಟೂರಿನಲ್ಲಿ ವೀರ ಯೋಧನ ನೆನಪು ಅಜರಾಮರವಾಗಿಸುವ ನಿಟ್ಟಿನಲ್ಲಿ ಅಂತ್ಯಕ್ರಿಯೆ ನಡೆಸಿದ ಕಡಲ ತೀರದ ಬಳಿ ಸ್ಮಾರಕ ನಿರ್ಮಿಸುವ ಕನಸು ಗ್ರಾಮಸ್ಥರದ್ದಾಗಿತ್ತು. ಸ್ಮಾರಕದಲ್ಲಿ ಅನೂಪ್ ಪೂಜಾರಿ ಅವರ ಪ್ರತಿಮೆ, ಜೀವನ ಸಾಧನೆ, ಸೇನಾ ಸೇವೆಯ ಮಾಹಿತಿ ಹಾಗೂ ದೇಶಭಕ್ತಿಯನ್ನು ಬಿಂಬಿಸುವ ವಿಶೇಷ ಫಲಕಗಳನ್ನು ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಹಾಗೆಯೇ ಕುಂದಾಪುರದ ಪ್ರಖ್ಯಾತ ತಾಣ ಕೋಡಿ, ಬೀಜಾಡಿ ಮೊದಲಾದೆಡೆ ಬರುವ ಪ್ರವಾಸಿಗರಿಗೆ ಹುತಾತ್ಮ ಯೋಧ, ದೇಶ ಸೇವೆಯ ಪರಿಪೂರ್ಣ ಮಾಹಿತಿ ಸಿಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ದೇಶ ಸೇವೆ ವೇಳೆ ಮಡಿದ ವೀರಯೋಧ ಅನೂಪ್ ಅವರ ಸೇವೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಬೀಜಾಡಿ ಗ್ರಾಮದಲ್ಲಿ ಸರಕಾರಿ ಭೂಮಿಯ ಲಭ್ಯತೆ ಕುರಿತು ಜಿಲ್ಲಾಡಳಿತದ ಸಮನ್ವಯತೆಯೊಂದಿಗೆ ಎಲ್ಲರನ್ನು  ವಿಶ್ವಾಸಕ್ಕೆ ಪಡೆದು ನಿಯಮಾನುಸಾರ ಕ್ರಮವಹಿಸಲಾಗುತ್ತದೆ.– ಪ್ರದೀಪ್ ಕುರುಡೇಕರ್ (ಕುಂದಾಪುರ ತಹಶಿಲ್ದಾರ್)

ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸಮುದ್ರ ತೀರದಲ್ಲಿ ಸ್ಮಾರಕ ನಿರ್ಮಾಣವಾದರೆ, ನಮ್ಮೂರಿನ ಅನೂಪ್ ಪೂಜಾರಿಯ ವೀರತನದ ಅರಿವು, ನೆನಪನ್ನು ಶಾಶ್ವತಗೊಳಿಸಬಹುದು. ಹಾಗೆ ಮುಂದಿನ ಪೀಳಿಗೆಗೆ ಸೇನೆ, ದೇಶಭಕ್ತಿ, ಸೇವಾ ಮನೋಭಾವದ ಪ್ರೇರಣೆಯಾಗಲಿದೆ. ಸಂಬಂಧಪಟ್ಟವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಜಾಗ ಮಂಜೂರು ಹಾಗೂ ಸ್ಮಾರಕ ನಿರ್ಮಾಣಕ್ಕೆ ಅಗತ್ಯಕ್ರಮಕೈಗೊಳ್ಳಬೇಕು.- ಅಶೋಕ್ ಪೂಜಾರಿ ಬೀಜಾಡಿ (ಸಾಮಾಜಿಕ ಕಾರ್ಯಕರ್ತ)

ಯೋಧನಾಗಿ‌ ಮಡಿದ ಸಹೋದರನ ಸ್ಮಾರಕ ನಿರ್ಮಾಣದ ಭರವಸೆ ಇನ್ನೂ ಈಡೇರಿಲ್ಲ. ಒಂದೂವರೆ ವರ್ಷ ಕಳೆದರೂ ಜಾಗದ ಗಡಿ ಗುರುತು ಮಾಡುವ ಕಾರ್ಯವೂ ನಡೆದಿಲ್ಲ. ಮನೆಯವರು ಅನೂಪ್ ಹೆಸರಿನಲ್ಲಿ ಟ್ರಸ್ಟ್ ಮಾಡಲು ತೀರ್ಮಾನಿಸಿದ್ದು ಇಲಾಖೆ ಜಾಗ ಮಂಜೂರು‌ ಮಾಡಿದಲ್ಲಿ ಸರ್ವರ ಸಹಕಾರದೊಂದಿಗೆ ಸ್ಮಾರಕ ನಿರ್ಮಿಸುವ ಉದ್ದೇಶ ಮಾಡಿದ್ದೇವೆ. ಆದರೆ ಆಡಳಿತದ ಸ್ಪಂದನೆ ಸಿಕ್ಕಿಲ್ಲ.– ಶಿವರಾಮ ಅಮಿನ್ (ಅನೂಪ್ ಸಹೋದರ)

Comments are closed.