ಕರಾವಳಿ

ಕೊಲ್ಲೂರು | ಕೊಡಚಾದ್ರಿಯಿಂದ ಬರುತ್ತಿದ್ದ ಜೀಪ್‌ಗೆ ಇನ್ಸುಲೆಟರ್ ವಾಹನ ಡಿಕ್ಕಿ; ಕೇರಳ ಮೂಲದ ಇಬ್ಬರು ಮೃತ್ಯು: 8 ಮಂದಿಗೆ ಗಾಯ

Pinterest LinkedIn Tumblr

ಕುಂದಾಪುರ: ಕೊಡಚಾದ್ರಿಯಿಂದ ಕೊಲ್ಲೂರಿನತ್ತ ಕೇರಳ ಮೂಲದ ಪ್ರವಾಸಿಗರನ್ನು ಕರೆತರುತ್ತಿದ್ದ ಜೀಪು ಹಾಗೂ ಕೊಲ್ಲೂರು ಕಡೆಯಿಂದ ನಿಟ್ಟೂರು ಘಾಟಿಯತ್ತ ಸಾಗುತ್ತಿದ್ದ ಇನ್ಸುಲೆಟರ್ (ಮೀನು ಸಾಗಾಟದ ವಾಹನ) ನಡುವೆ ಕೊಲ್ಲೂರು ದಳಿ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಜೀಪು ಚಾಲಕ ಸಹಿತ 8 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ಕೇರಳ ಮೂಲದವರಾದ ಜ್ಯೋತಿ(40), ಆರ್ಯಾ ಅನೂಪ್(28) ಎಂದು ಗುರುತಿಸಲಾಗಿದೆ. ಕೇರಳ ಮೂಲದ ಅಯನ್ (5), ಅವನಿ (8), ಅರ್ಜುನ್ (9), ಮಿನಿ(60), ಎಭಿ(36), ಅನೂಪ್ (37), ಜ್ಯೋತಿಷ್(43),  ಜೀಪು ಚಾಲಕ ನಿಟ್ಟೂರು ಮೂಲದ ದೇವರಾಜು ಗಾಯಾಳುಗಳು.

ಕೇರಳದಿಂದ ವಿವಿಧ ಧಾರ್ಮಿಕ ಕ್ಷೇತ್ರಗಳ ಸಂದರ್ಶನಕ್ಕೆ ಆಗಮಿಸಿದ್ದ ಅವರು ರವಿವಾರ ಕೊಲ್ಲೂರು ಭೇಟಿ ನೀಡಿ ಬೆಳಿಗ್ಗೆ ಬಾಡಿಗೆ ಜೀಪ್‌ನಲ್ಲಿ ಕೊಡಚಾದ್ರಿಗೆ ತೆರಳಿ ವಾಪಾಸ್ಸಾಗುವಾಗ ಈ ಘಟನೆ ಸಂಭವಿಸಿದೆ. ಅಪಘಾತದ ತೀವೃತೆಗೆ ಜೀಪಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮೀನು ಸಾಗಾಟದ ಇನ್ಸುಲೆಟರ್ ವಾಹನ ಚಾಲಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.

ಮುಚ್ಚಿದ್ದ ಸರಕಾರಿ ಆಸ್ಪತ್ರೆ!: ಕೊಲ್ಲೂರು ಸರಕಾರಿ ಆಸ್ಪತ್ರೆ ಭಾನುವಾರ ಮುಚ್ಚಿದ್ದು ಸರಕಾರಿ ಅಂಬುಲೆನ್ಸ್ ವಾಹನವೂ ಸಿಗದ ಕಾರಣ ಸ್ಥಳೀಯರೇ ತಮ್ಮ ಸ್ವಂತ ಜೀಪು ಹಾಗೂ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಜಡ್ಕಲ್ ಮಹಾಲಕ್ಷ್ಮಿ ಆಸ್ಪತ್ರೆಯ ವೈದ್ಯರಾದ ಸಿ.ವಿ. ಕಲ್ಮಠ್ ತುರ್ತು ಪ್ರಥಮ  ಚಿಕಿತ್ಸೆ ನೀಡಿದರು. ಮಾರ್ಗಮದ್ಯೆಯಿಂದ ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ಗಾಯಾಳುಗಳನ್ನು ಕ್ಷಿಪ್ರವಾಗಿ ಸಾಗಿಸಲು ಚಿತ್ತೂರು‌ ಸಾಬು, ಗಂಗೊಳ್ಳಿ ಆಪತ್ಬಾಂಧವ 24*7 ಅಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ನೆರವಾದರು.

ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕೊಲ್ಲೂರು ಠಾಣೆ ಪಿಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Comments are closed.