ಕುಂದಾಪುರ : ಕಾಲೇಜು ಪ್ರವಾಸ ಹೊರಟಿದ್ದ ಬಸ್ಸು ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಮತ್ತು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಚಾಲಕ ಸಹಿತ ಮೂವರು ಮೃತಪಟ್ಟ ಘಟನೆ ತ್ರಾಸಿ ಸಮೀಪದ ಮರವಂತೆ ಬೀಚ್ ಬಳಿ ಎ.29 ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ಹಂತದ ಬಿಕಾಂ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದು, ಬಸ್ಸಿನಲ್ಲಿ 24 ವಿದ್ಯಾರ್ಥಿ, 23 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು.
ಇವರೆಲ್ಲ ಮುರ್ಡೇಶ್ವರಕ್ಕೆ ತೆರಳಿದ್ದು ಅಲ್ಲಿಂದ ಬುಧವಾರ ಬೆಳಗ್ಗೆ ಉಡುಪಿ ದೇವಸ್ಥಾನಗಳಿಗೆ ಬಸ್ಸಿನಲ್ಲಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಬದಿ ನಿಲ್ಲಿಸಿದ ಗ್ಯಾಸ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆಯಿತು. ಬಳಿಕ ಅಲ್ಲೇ ಮುಂದೆ ನಿಲ್ಲಿಸಿದ ಗೂಡ್ಸ್ ಲಾರಿಗೂ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ಇದರಿಂದ ಬಸ್ಸಿನ ಮುಂದಿನ ಭಾಗ ಹಾಗೂ ಎಡ ಪಾರ್ಶ್ವ ನುಜ್ಜುಗುಜ್ಜಾಗಿದ್ದು, ಬಸ್ಸಿನಲ್ಲಿದ್ದ ಚಾಲಕ, ಕ್ಲೀನರ್ ಮತ್ತು ಅಡುಗೆ ಸಹಾಯಕರೊಬ್ಬರು ಮೃತಪಟ್ಟರೆಂದು ತಿಳಿದುಬಂದಿದೆ. ಉಳಿದಂತೆ ಒಂದಷ್ಟು ಮಂದಿ ಗಾಯಗೊಂಡು ಕುಂದಾಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments are closed.