ಕುಂದಾಪುರ: ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ರೈತ ಗೀತೆ, ದೇಶಭಕ್ತಿ ಗೀತೆ, ಸಿನಿಮಾ ಹಾಡುಗಳು ಸೇರಿದಂತೆ ಸಾವಿರಾರು ಹಾಡುಗಳಿಗೆ ತಮ್ಮ ಅದ್ಭುತ ಕಂಠದ ಮೂಲಕ ಧ್ವನಿಯಾಗಿದ್ದ ಹಿರಿಯ ಹಾಡುಗಾರ ಆಕಾಶವಾಣಿ, ದೂರದರ್ಶನ ಕಲಾವಿದ ಗಣೇಶ್ ಗಂಗೊಳ್ಳಿ (64) ಮಂಗಳವಾರ ನಿಧನರಾಗಿದ್ದಾರೆ.

ಮೂಲತಃ ಗಂಗೊಳ್ಳಿಯ ಬಾವಿಕಟ್ಟೆ ನಿವಾಸಿಯಾಗಿದ್ದ ಇವರು, ಡಿ.ನಾರಾಯಣ ಹಾಗೂ ಚಂದು ದಂಪತಿಯ ಪುತ್ರರಾಗಿದ್ದರು. ಗೋಪಾಡಿ ಗ್ರಾಮದ ಪಡುಗೋಪಾಡಿಯ ಪತ್ನಿಯ ಮನೆಯಲ್ಲಿ ನೆಲೆಸಿದ್ದರು. ಸೋಮವಾರ ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅವರು ಅಸುನೀಗಿದ್ದಾರೆ.
ಮಹಾಬಲೇಶ್ವರ್ ಹೊನ್ನಾವರ, ಮಧೂರು ಬಾಲಸುಬ್ರಹ್ಮಣ್ಯಂ, ವಾಸುದೇವ ಭಟ್ ಉಡುಪಿ ಅವರ ಶಿಷ್ಯರಾಗಿ ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಅಭ್ಯಾಸ ನಡೆಸಿದ್ದ ಅವರು,ಅನೇಕ ವಿದ್ಯಾರ್ಥಿಗಳಿಗೆ ಜಾನಪದ ಸಂಗೀತ ಶಿಕ್ಷಣ ನೀಡಿದ್ದಾರೆ.
ನಾಡಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಗಣೇಶ್ ಗಂಗೊಳ್ಳಿ ಹಲವು ವೃತ್ತಿಪರ ಹಾಗೂ ಹವ್ಯಾಸಿ ಸಂಗೀತ ತಂಡಗಳಲ್ಲಿ ಹಿನ್ನೆಲೆ ಹಾಡುಗಾರರಾಗಿ ಸೇವೆ ನೀಡಿದ್ದರು. 1990 ರಿಂದ 2010 ವರೆಗೆ ಜಿಲ್ಲೆಯ ಯಾವುದೇ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿದ್ದರು ಅಲ್ಲಿ ಗಣೇಶ್ ಅವರ ಧ್ವನಿ ಮಾಧುರ್ಯ ಇರುತ್ತಿತ್ತು. ಪ್ರತಿಭೆ ಇದ್ದರೂ ಬೆಳಕಿಗೆ ಬಾರದ ಅನೇಕ ಪ್ರತಿಭೆಗಳಿಗೆ ವೇದಿಕೆ ನೀಡುವ ಕಾರ್ಯವನ್ನು ಅವರು ಮಾಡಿದ್ದರು.
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿದ್ದ ಅವರು, ಸಾವಿರಾರು ಜಾನಪದ ಹಾಡುಗಳಿಗೆ ಧ್ವನಿಯಾಗಿದ್ದರು. ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರಿಗೆ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ಡಾ.ಬಿ.ಆರ್. ಅಂಬೇಡ್ಕರ್ ರಾಜ್ಯ ಪ್ರಶಸ್ತಿ, ಸಂಸ್ಕಾರ ಭಾರತಿ ರಾಜ್ಯ ಪ್ರಶಸ್ತಿ, ಕರ್ನಾಟಕ ಯುವರತ್ನಾ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದರು. ಅವರ ಪ್ರತಿಭೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿದ್ದವು.ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
Comments are closed.