ಕರಾವಳಿ

ಬೈಂದೂರಿನ ಶಿರೂರಿನಲ್ಲಿ ಮನೆ ಕಳವಿಗೆ ಯತ್ನಿಸಿದ್ದ ಆರೋಪಿಯಿಂದಲೇ ಹೈವೇಯಲ್ಲಿ ಯರ್ರಾಬಿರ್ರಿ ಸ್ಕೂಟರ್ ಸ್ಟಂಟ್!

Pinterest LinkedIn Tumblr

ಕುಂದಾಪುರ: ಶಿರೂರು ಗ್ರಾಮದ ಕೋಣಮಕ್ಕಿ ಎಂಬಲ್ಲಿನ  ಮನೆಯಲ್ಲಿ ಮಾ.18 ರಂದು ಕಳ್ಳತನ ಯತ್ನ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೌಜಾನ್‌ ಅಹ್ಮದ್‌ (25) ಬಂಧಿತ ಆರೋಪಿ.

ಮನೆಯಲ್ಲಿ ಮಹಿಳೆಯೊಬ್ಬರು ಮಲಗಿದ್ದ ವೇಳೆ, ಹಿಂಬಾಗಿಲನ್ನು ಒಡೆದು ಒಳನುಗ್ಗಿ, ಮನೆಯಲ್ಲಿದ್ದ ಗೋಡೇಜ್ ಅಲಮಾರಿಯನ್ನು ತೆರೆದು ಹುಡುಕಾಡುತ್ತಿದ್ದನು. ಈ ವೇಳೆ ಮಹಿಳೆ ಎಚ್ಚರಗೊಂಡು ಬೊಬ್ಬೆ ಹಾಕಿದಾಗ, ಆರೋಪಿ ಹಿಂಬಾಗಿಲಿನಿಂದ ಪರಾರಿಯಾಗಿದ್ದ. ಈ ಕುರಿತು ಮಹಿಳೆ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕುಂದಾಪುರ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮತ್ತು ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಬೈಂದೂರು ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ.ವೈ ನೇತೃತ್ವದಲ್ಲಿ,  ಪಿಎಸ್ಐ ನವೀನ ಪಿ. ಬೋರಕರ,  ಸಿಬ್ಬಂದಿಗಳಾದ ಚಂದ್ರಶೇಖರ, ಚಿದಾನಂದ, ಮಾಳಪ್ಪ ದೇಸಾಯಿ, ರಾಮದಾಸ್ ಅವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಲಾಗಿದ್ದು ಈ ತಂಡವು ಮಾ.20 ರಂದು ಆರೋಪಿ ಪೌಜಾನ್  ಅಹ್ಮದ್‌ನನ್ನು ಬಂಧಿಸಿದೆ.

ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೈಕ್ ವ್ಹೀಲಿಂಗ್‌ ಪ್ರಕರಣದ ಆರೋಪಿ: ಮಾ.20 ರಂದು ಬೆಳಿಗ್ಗೆ ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಸ್ಕೂಟರ್‌ನಲ್ಲಿ ಹೆಲ್ಮೆಟ್ ಕೂಡ ಧರಿಸದೆ ಭಯಾನಕ ರೀತಿಯಲ್ಲಿ ವೀಲಿಂಗ್ ಮಾಡಿದ ಪ್ರಕರಣದಲ್ಲೂ ಇದೇ ಆರೋಪಿ ಭಾಗಿಯಾಗಿದ್ದ‌ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುತ್ತಿದ್ದ ದ್ವಿಚಕ್ರ ವಾಹನದ‌ ಮೇಲೆ ವಿವಿಧ ಭಂಗಿಯಲ್ಲಿ ಸರ್ಕಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು ಈ‌ ಪ್ರಕರಣಕ್ಕೆ‌ ಸಂಬಂಧಿಸಿ ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದರು.

 

Comments are closed.