ಕರಾವಳಿ

ಹೋಟೆಲ್‌ ವ್ಯವಹಾರಕ್ಕೆ ಹೊಡೆತ ಕೊಟ್ಟ ಎಲ್‌ಪಿಜಿ ಅಭಾವ! | ಗ್ರಾಹಕರಿಗೆ ಸೇವೆ ನೀಡಲು ಸಾಹಸ | ಕುಂದಾಪುರದಲ್ಲಿ ಮುಚ್ಚಿದ ಒಂದಷ್ಟು ಹೋಟೆಲ್‌ಗಳು!

Pinterest LinkedIn Tumblr

ಹೋಟೆಲ್ ಮುಚ್ಚುವ ಭೀತಿ ಜೊತೆಗೆ ಗ್ರಾಹಕರನ್ನು ಕಳೆದುಕೊಳ್ಳುವ ಭಯ, ಸಿಬ್ಬಂದಿಗಳನ್ನು ಹಿಡಿದಿಟ್ಟುಕೊಳ್ಳುವ ಸಾಹಸ!

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ವಾಣಿಜ್ಯ ಬಳಕೆ ಅಡುಗೆ ಅನಿಲ ಅಭಾವದಿಂದಾಗಿ ಕುಂದಾಪುರ ತಾಲೂಕಿನ ವಿವಿದೆಡೆ ಹೋಟೆಲ್ ಉದ್ಯಮಕ್ಕೆ ಬಾರೀ ಹೊಡೆತ ಬಿದ್ದಿದ್ದು ಗ್ಯಾಸ್ ಮೂಲಕವೇ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿದ್ದ ಸಣ್ಣ-ಪುಟ್ಟ ಹೋಟೆಲ್, ಕ್ಯಾಂಟಿನ್‌ಗಳು ಒಂದಷ್ಟು ಮುಚ್ಚಿದ ಬಗ್ಗೆ ವರದಿಯಾಗಿದೆ. ಇನ್ನು ಕೆಲ ಪ್ರಸಿದ್ದ ಸಸ್ಯಾಹಾರಿ ಹೋಟೆಲ್‌ಗಳಲ್ಲಿ ಮೆನು ಬದಲಾವಣೆ ಮಾಡಲಾಗಿದ್ದು ದೋಸೆ ಮೊದಲಾದ ತಿಂಡಿ-ತಿನಿಸುಗಳು ಗ್ರಾಹಕರಿಗೆ ಅಲಭ್ಯವಾಗಿದೆ.

ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನಲ್ಲಿರುವ ಹೋಟೆಲ್‌ ಮಹಾಲಕ್ಷ್ಮೀಯಲ್ಲಿ ಎಲ್‌ಪಿ‌ಜಿ ಅಭಾವ ಕಂಡುಬಂದಿದ್ದು ಹಿಂಬಂದಿಯ ಜಾಗದಲ್ಲಿ ಸೌದೆ ಒಲೆ ನಿರ್ಮಿಸಲಾಗಿದೆ. ಎಲ್ಲಾ ಸಮಸಯದಲ್ಲಿ ದೋಸೆ ಮೊದಲಾದ ಕೆಲ ಆಹಾರಖಾದ್ಯ ದೊರಕುತ್ತಿಲ್ಲ. ಆದಷ್ಟು ಗ್ರಾಹಕರಿಗೆ ಸೇವೆ ನೀಡಲು ಬದ್ಧರಾಗಿದ್ದೇವೆ. ಬೆಂಕಿ ರಹಿತವಾಗಿ ತಯಾರಿಸಬಹುದಾದ ಆಹಾರ ಖಾದ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸೀಸನ್ ಸಮಯದಲ್ಲಿ ಹೀಗಾಗಿದ್ದು ಹೋಟೆಲ್ ಕೊಠಡಿ ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರು ಎಲ್‌ಪಿಜಿ ಲಭ್ಯತೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಮಹಾಲಕ್ಷ್ಮೀ ಹೋಟೆಲ್ ಜನರಲ್ ಮ್ಯಾನೇಜರ್ ಮಧುಸೂಧನ್ ‘ಕನ್ನಡಿಗವರ್ಲ್ಡ್’ಗೆ ತಿಳಿಸಿದ್ದಾರೆ.

ಕುಂದಾಪುರದ ಪ್ರಸಿದ್ಧ ಪಾರಿಜಾತ ಹೋಟೆಲ್‌ನಲ್ಲಿ ಕೆಲವು ದಿನಗಳಿಂದ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲಾಗುತ್ತಿದ್ದು ಗ್ರಾಹಕರಿಗೆ ಅಗತ್ಯ ತಿನಿಸುಗಳನ್ನು ಪೂರೈಸಲಾಗುತ್ತಿದೆ. ಕೋಟದ ಪ್ರಸಿದ್ಧ ಲತಾ ಹೋಟೆಲ್‌ನಲ್ಲಿ ಬೆಳಿಗ್ಗೆ ಮೆನು ಬದಲಾವಣೆಯಾಗಿದ್ದು ಇಲ್ಲಿನ ಸ್ಪೆಷಲ್ ದೋಸೆಗಳು ಸಿಗೋದಿಲ್ಲ. ಇನ್ನು ವಿವಿದೆಡೆ ಕೆಲವು ಮಾಂಸಾಹಾರಿ ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಕೆಲವು ಬಾರ್ &ರೆಸ್ಟೋರೆಂಟ್‌ಗಳಲ್ಲಿ ಸೌದೆ ಒಲೆ ಬಳಕೆ ಮಾಡುತ್ತಿದ್ದು ಹಲವೆಡೆ ಮೀನು ಖಾದ್ಯಗಳು ದೊರೆಯುತ್ತಿಲ್ಲ, ಬದಲಾಗಿ ಬಿರಿಯಾನಿ ಮೊದಲಾದ ಖಾದ್ಯಗಳಷ್ಟೇ ಲಭಿಸುತ್ತಿದೆ. ಬಹಳಷ್ಟು ಕಡೆ ಬಾಯಿ ರುಚಿಗೆ ತಕ್ಕ ಸಸ್ಯಹಾರಿ, ಮಾಂಸಹಾರಿ ಖಾದ್ಯಗಳು ಭೋಜನ ಪ್ರಿಯರಿಗೆ ಸಿಗುತ್ತಿಲ್ಲ.

ಕುಂದಾಪುರ ನಗರದಲ್ಲಿ ಸಂಜೆ ಮೇಲೆ ಕಾರ್ಯಾಚರಿಸುತ್ತಿದ್ದ ಬಹುತೇಕ ಚೈನೀಸ್ ಪಾಸ್ಟ್‌ಪುಡ್ (ಮೊಬೈಲ್ ಕ್ಯಾಂಟಿನ್) ಮುಚ್ಚಲಾಗಿದೆ. ಇದರಿಂದ ವರ್ತಕರಿಗೆ ಮಾತ್ರವಲ್ಲದೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವಲಸೆ ಕಾರ್ಮಿಕರು ಸಹಿತ ಚೈನೀಸ್ ಖಾದ್ಯ ಪ್ರಿಯ ಸಾರ್ವಜನಿಕರಿಗೆ ಕಸಿವಿಸಿಯಾಗಿದೆ.

ಗೂಡಂಗಡಿಗಳು, ಆಮ್ಲೇಟ್, ಮಿರ್ಚಿ, ಬೋಂಡಾ, ಪಾನಿಪೂರಿ, ಗೋಬಿ ಮಂಚೂರಿ ಮೊದಲಾದ ಖಾದ್ಯ ತಯಾರಕರು ಅಚ್ಚುಕಟ್ಟಿನಲ್ಲಿ ಮಾಡಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಬೈಂದೂರು ನಗರದಲ್ಲಿ ಈವರೆಗೆ ಗಂಭೀರ ಸಮಸ್ಯೆಯಾಗಿಲ್ಲ ಎಂದು ವರದಿಯಾಗಿದೆ. ಇರುವ ಅಡುಗೆ ಅನಿಲ ಬಳಸುವುದು ಒಂದೆಡೆಯಾದರೆ ಹಿಂದೆ ಉಪಯೋಗಿಸಿ ಬಳಿಕ ಮೂಲೆ ಸೇರಿದ್ದ ಸೌದೆ ಒಲೆಗಳ ಉಪಯೋಗ ಮತ್ತೆ ಆರಂಭವಾಗಿದೆ. ಅನ್ನ ಹಾಗೂ ಹೆಚ್ಚು ಬೇಯಿಸಬೇಕಾದ ಅಡುಗೆ ಪದಾರ್ಥಗಳನ್ನು ಸೌದೆ ಒಲೆಯಲ್ಲಿ ಮಾಡಿ ಉಳಿದ ಆಹಾರ ತಯಾರಿಕೆಗೆ ಗ್ಯಾಸ್ ಒಲೆ ಬಳಸಲಾಗುತ್ತಿದೆ. ಸಣ್ಣ ಹೋಟೆಲ್ ವ್ಯವಹಾರಸ್ಥರು ತಮ್ಮ ಮನೆಗಳಲ್ಲಿ ಆಹಾರ ತಯಾರಿಸಿ ತಂದು ಮಾರಾಟ ಮಾಡುವುದು ಕೂಡ ಕಂಡುಬಂದಿದೆ. ಹೀಗಾಗಿ  ವ್ಯವಹಾರ ಸ್ಥಗಿತಗೊಳಿಸುವ ಪರಿಸ್ಥಿತಿ ಈವರೆಗೆ ಬಂದಿಲ್ಲ ಎನ್ನಲಾಗಿದೆ.

ವ್ಯವಹಾರ ಬಂದ್ ಮಾಡಿದರೆ ಮತ್ತೆ ಸಿಬ್ಬಂದಿಗಳು ಸಿಗಲ್ಲ: ಈಗಾಗಲೇ ಕುಂದಾಪುರದಲ್ಲಿರುವ 2 ಹೋಟೆಲ್ ಪೈಕಿ ಮಾಂಸಹಾರಿ ಹೋಟೆಲ್ (ಎಂ ಕೆಫೆ) ಮುಚ್ಚಿದ್ದೇವೆ. ಸಸ್ಯಾಹಾರಿ ಹೋಟೆಲ್‌ನಲ್ಲಿ ಮಿತ ಆಹಾರ ಮಾತ್ರವೇ ಸಿದ್ಧಪಡಿಸಿ ನೀಡಲಾಗುತ್ತಿದೆ. ಕೊಲ್ಲೂರಿನ ಹೋಟೆಲ್‌ನಲ್ಲಿ ನಿರ್ದಿಷ್ಟ ಆಹಾರ ಖಾದ್ಯಗಳನ್ನು ಕೆಲ ದಿನಗಳಿಂದ ಸೌದೆ ಒಲೆಯಲ್ಲಿ ತಯಾರಿಸಲಾಗುತ್ತಿದೆ. ಅನಿಲ ಸಮಸ್ಯೆ ಹೀಗೆಯೇ ಮುಂದುವರಿದರೆ ವ್ಯವಹಾರಕ್ಕೆ ಬಾರೀ ಹೊಡೆತ ಉಂಟಾಗಲಿದೆ. ಹೋಟೆಲ್ ಮುಚ್ಚುವುದು ದೊಡ್ಡ ವಿಚಾರವಲ್ಲ. ಒಂದೆಡೆ ಸಂಸ್ಥೆಯಿಂದ ಗ್ರಾಹಕರು ದೂರಾಗುತ್ತಾರೆ  ಮತ್ತೊಂದೆಡೆ ಉದ್ಯೋಗ ನೀಡದಿದ್ದರೆ ಸಿಬ್ಬಂದಿ-ನೌಕರರು ತೆರಳಿದಲ್ಲಿ ವಾಪಾಸ್ ಕರೆತರುವುದು ಮತ್ತೊಂದು ಸವಾಲು.-:-ವಿಕ್ರಮ್ ಜಿ.ಡಿ. (ಆಡಳಿತ ನಿರ್ದೇಶಕರು, ಮಹಾಲಕ್ಷ್ಮೀ ಗ್ರೂಫ್ ಆಫ್ ಹೋಟೆಲ್ಸ್ ಕೊಲ್ಲೂರು ಮತ್ತು ಕುಂದಾಪುರ)

Comments are closed.