ಕುಂದಾಪುರ: ತ್ವರಿತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಲೋಕ ಅದಾಲತ್ನಲ್ಲಿ ಶನಿವಾರ ಕುಂದಾಪುರದ ನ್ಯಾಯಾಲಯದಲ್ಲಿ ಒಟ್ಟು 891 ಪ್ರಕರಣಗಳು ಇತ್ಯರ್ಥಗೊಂಡಿದ್ದು, 5.39 ಕೋ.ರೂ. ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.

17,973 ವ್ಯಾಜ್ಯ ಪೂರ್ವ ಪ್ರಕರಣವನ್ನು ಅದಾಲತ್ನಲ್ಲಿ ಇತ್ಯರ್ಥಪಡಿಸಿದ್ದು, ಅದರಲ್ಲಿ ಪರಿಹಾರ ರೂಪದಲ್ಲಿ 95.44 ಲಕ್ಷ ರೂ. ನೀಡುವಂತೆ ಸೂಚಿಸಲಾಗಿದೆ.
ಇನ್ನು ಕುಂದಾಪುರದ 891 ಪ್ರಕರಣಗಳ ಪೈಕಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 17 ಪ್ರಕರಣ ಇತ್ಯರ್ಥಗೊಂಡು, 89.65 ಲಕ್ಷ ರೂ. ಪರಿಹಾರ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 54 ಇತ್ಯರ್ಥಗೊಂಡು, 2.56 ಕೋ.ರೂ. ಪರಿಹಾರ, ಪ್ರಧಾನ ಸಿವಿಲ್ ಮತ್ತು ಜೆಎಎಂಫ್ ಸಿ ನ್ಯಾಯಾಲಯ – 100 ಇತ್ಯರ್ಥಗೊಂಡು, 89.28 ಲಕ್ಷ ಪರಿಹಾರ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ 208 ಇತ್ಯರ್ಥಗೊಂಡು, 58.86 ಲಕ್ಷ ರೂ. ಪರಿಹಾರ ಹಾಗೂ ಒಂದನೇ ಹೆಚ್ಚವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ 512 ಪ್ರಕರಣ ಇತ್ಯರ್ಥಗೊಂಡಿದ್ದು, 44.73 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಮನಸ್ತಾಪದಿಂದ ದೂರಾಗಿದ್ದ ದಂಪತಿ ಲೋಕ ಅದಾಲತ್ನಲ್ಲಿ ಒಂದಾದರು!: ವಿವಾಹವಾದ ಕೆಲವೇ ತಿಂಗಳಿನಲ್ಲಿ ಮನಸ್ತಾಪದಿಂದ ಒಂದೂವರೆ ವರ್ಷದಿಂದ ದೂರವಿದ್ದು, ವಿಚ್ಛೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಹಾಕಿ ಬೇರೆಯಾಗಲು ನಿರ್ಧರಿಸಿದ್ದ ಜೋಡಿಯೊಂದು ಕುಂದಾಪುರದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ನಡೆದಿದೆ.
ಗಂಗೊಳ್ಳಿಯ ವಿದ್ಯಾ ಹಾಗೂ ಬ್ರಹ್ಮಾವರದ ನಂದ ಕಿಶೋರ್ ಅವರು 2024 ರಲ್ಲಿ ವಿವಾಹವಾಗಿದ್ದು, ಅದಾದ ಕೆಲ ತಿಂಗಳ ನಂತರ ಪತಿಯೊಂದಿಗೆ ಬಾಳವುದು ಕಷ್ಟ, ತನಗೆ ಜೀವನಾಂಶ ಕೊಡುವಂತೆ ಕೇಸ್ ದಾಖಲಿಸಿ, ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.
ಲೋಕ ಅದಾಲತ್ ನಲ್ಲಿ ವಿಚಾರಣೆ ನಡೆಸಿದ ಕುಂದಾಪುರದ ಒಂದನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಎಸ್. ಅವರು, ಇಬ್ಬರ ವಯಸ್ಸು ಕೂಡ ಸಣ್ಣದಾಗಿದ್ದು, ಒಂದಾಗಿ ಬದುಕುವಂತೆ ಕಿವಿಮಾತು ಹೇಳಿದರು. ಇದಕ್ಕೆ ಇಬ್ಬರೂ ಕೂಡ ಸಹಮತ ವ್ಯಕ್ತಪಡಿಸಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿತು.
ಕಕ್ಷಿದಾರರ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
Comments are closed.