ಉಡುಪಿ: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪೆರ್ಡೂರು ಪಾಡಿಗಾರಿನ ರಾಘವೇಂದ್ರ (36) ಹಾಗೂ ಪೆರ್ಡೂರು ಕುಂಜದಕಟ್ಟೆ ಸುಧೀಂದ್ರ ಶೆಟ್ಟಿ ಯಾನೆ ಬಾಬು (36) ಎಂದು ಗುರುತಿಸಲಾಗಿದೆ.
ಫೆ.17ರ ರಾತ್ರಿ 10:30ರ ಸುಮಾರಿಗೆ ರಾಘವೇಂದ್ರ ಮತ್ತು ಸುಧೀಂದ್ರ ಅವರು ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಕಲಂ 5,12ರಂತೆ ಪ್ರಕರಣ ದಾಖಲಾಗಿತ್ತು.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಅವರ ನಿರ್ದೇಶನದಂತೆ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹಿರಿಯಡಕ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಪುನೀತ್ ಕುಮಾರ್ ಬಿ.ಇ., ವಿಠ್ಠಲ ಮಲವಡಕರ, ಸಿಬ್ಬಂದಿಗಳಾದ ಶೈಲೇಶ್ ಕುಮಾರ ಮತ್ತು ರಮೇಶ ಅವರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಲ್ಲದೇ ಅವರು ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.