ಕರಾವಳಿ

ಕೋಲ ಮೊದಲಾದ ದೈವಗಳ ಕಾರ್ಯಕ್ರಮದಿಂದ ಸಮಾಜ ಒಗ್ಗೂಡುತ್ತದೆ: ನಾರಾಯಣ ಟಿ. ಪೂಜಾರಿ

Pinterest LinkedIn Tumblr

ಕುಂದಾಪುರ: ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮನಸ್ಸುಗಳನ್ನು ಬೆಸೆಯುತ್ತದೆ. ಆಚರಣೆಗಳ ಮೂಲಕ ಸಮಾಜ ಒಗ್ಗೂಡಲು ಸಾಧ್ಯವಿದೆ. 700 ವರ್ಷಗಳ ಇತಿಹಾಸವಿರುವ ಈ ಕಾರಣಿಕ ದೈವಸ್ಥಾನವನ್ನು ದೊಡ್ಮನೆ ಕುಟುಂಬಸ್ಥರು, ಗ್ರಾಮಸ್ಥರು‌ ನಂಬಿದ್ದು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ನಾರಾಯಣ ಟಿ. ಪೂಜಾರಿ ಹೇಳಿದರು.

ಗುಜ್ಜಾಡಿ ದೊಡ್ಮನೆಯ ಶ್ರೀ ಯಕ್ಷೆ, ಪಂಜುರ್ಲಿ, ಹಾಯ್ಗುಳಿ ಹಾಗೂ ಪರಿವಾರ ದೈವಸ್ಥಾನದಲ್ಲಿ ದಾನಿಗಳು, ಭಕ್ತರ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಮೇಲ್ಚಾವಣಿ ಉದ್ಘಾಟನೆ ಹಾಗೂ ಸಿರಿಸಿಂಗಾರ ಕೋಲ ಸೇವೆಯ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಕರಾವಳಿಯ ಜನರು ದೈವ-ದೇವರ ಬಗ್ಗೆ ಅಪಾರ ಶ್ರದ್ಧಾ ಭಕ್ತಿಯಿಟ್ಟುಕೊಂಡವರು. ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ಜೊತೆಗೆ ಸಮಾಜ ಒಗ್ಗೂಡಲು ಸಾಧ್ಯ. ಧಾರ್ಮಿಕ ಕಾರ್ಯಕ್ರಮವಾದ ಕೋಲ ಸೇವೆಗೆ ಅದರದ್ದೇ ಆದ ಕಟ್ಟುಪಾಡುಗಳಿದೆ. ರಾಜರ ಕಾಲದಲ್ಲೂ ಈ ಸೇವೆ ನಡೆದಿತ್ತು ಎಂಬ ಉಲ್ಲೇಖವಿದೆ. ಹಿಂದಿನ ಕಾಲದಲ್ಲಿ ಕುಟುಂಬದಲ್ಲಿನ ಆರೋಗ್ಯ, ಸಂತಾನ, ಕೃಷಿ ಸಮಸ್ಯೆಗಳು ಹಾಗೂ ಊರಿನಲ್ಲಿನ ಸಾಂಕ್ರಾಮಿಕ ರೋಗಗಳು, ಬರಗಾಲ ಮೊದಲಾದ ಸಂಕಷ್ಟಗಳು ಬಂದಾಗ ದೈವ-ದೇವರ ಮೊರೆ ಹೋಗಿ ಹರಕೆ, ಸೇವೆ ಹೇಳಿಕೊಳ್ಳುವುದು ನಂಬಿಕೆಯ ತಳಹದಿಯಾಗಿತ್ತು. ಅದು ಇಂದಿಗೂ ಮುಂದುವರೆದಿದೆ. ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಕೊಂಚ ಬದಲಾವಣೆಗಳಾದರೂ‌ ಕೂಡ ಮೂಲತತ್ವವನ್ನು ದೈವ ನರ್ತಕರು, ಅರ್ಚಕರು ಪಾಲಿಸುತ್ತಿರುವುದು ಎಂಬುದು ಬಿಲ್ಲವ ಸಮುದಾಯದ ಹೆಮ್ಮೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ದಾನಿಗಳನ್ನು, ಹಿರಿಯರನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಗುಜ್ಜಾಡಿ ಗ್ರಾ‌.ಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಬೆಣ್ಗೇರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಮೇಸ್ತ, ದೈವಸ್ಥಾನದ ಪಾತ್ರಿಗಳಾದ ಸುರೇಶ ಪೂಜಾರಿ, ಅರ್ಚಕರಾದ ರವಿ ಸಿ. ಪೂಜಾರಿ ಮೊದಲಾದವರಿದ್ದರು.

ದಿನೇಶ್ ಪೂಜಾರಿ ದೊಡ್ಮನೆ ನಿರೂಪಿಸಿ, ಜಯರಾಜ ಪೂಜಾರಿ ವಂದಿಸಿದರು.

Comments are closed.