ಕರಾವಳಿ

ಬ್ರಹ್ಮಾವರದ ಕೃಷಿ ಡಿಪ್ಲೊಮಾ ವಿದ್ಯಾಲಯವನ್ನು ಉನ್ನತೀಕರಿಸುವುದಾಗಿ ಕೃಷಿ ಸಚಿವರ ಘೋಷಣೆ | ಈ ಬಗ್ಗೆ ಗಮನ ಸೆಳೆದಿದ್ದ ಎಂಎಲ್‌ಸಿ ಮಂಜುನಾಥ ಭಂಡಾರಿ

Pinterest LinkedIn Tumblr

ಬ್ರಹ್ಮಾವರ: ಬ್ರಹ್ಮಾವರದಲ್ಲಿ ಡಿಪ್ಲೊಮಾ (ಕೃಷಿ), ವಿದ್ಯಾಲಯವನ್ನು ಸ್ನಾತಕ ಪದವಿ ಕಾಲೇಜು ಮಾಡಿ ಉನ್ನತೀಕರಿಸುವುದಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಪುತ್ತೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಬ್ರಹ್ಮಾವರದಲ್ಲಿ ಸ್ನಾತಕ ಪದವಿ ಕಾಲೇಜು ಮಾಡುವ ಕುರಿತು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಪರಿಷತ್ ಶಾಸಕರು ನೀಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಘೋಷಣೆ ಮಾಡಿದ್ದಾರೆ.

ಬ್ರಹ್ಮಾವರದಲ್ಲಿ ಪ್ರಸ್ತುತ ಇರುವ ಕಾಲೇಜು ಕಟ್ಟಡ ಪ್ರಯೋಗ ಶಾಲೆ, ವಿದ್ಯಾರ್ಥಿನಿಲಯಗಳ ಸೌಲಭ್ಯ, ಲಭ್ಯವಿರುವ ಪಾಠೋಪಕರಣಗಳು ಮತ್ತು ಪೀಠೋಪಕರಣಗಳು ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಬೋಧಕ ಹಾಗೂ ಬೋದಕೇತರ ಸಿಬ್ಬಂದಿಯೊಂದಿಗೆ ಹೆಚ್ಚಿನ ಆರ್ಥಿಕ ಹೊರ ಇಲ್ಲದಂತೆ ಸ್ನಾತಕ ಪದವಿ ಕಾಲೇಜನ್ನು ಸ್ಥಾಪಿಸಬಹುದಾಗಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಯಾವುದೇ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯಗಳು ಇಲ್ಲದಿರುವುದರಿಂದ, ಈ ಭಾಗದಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ ಅವಶ್ಯಕವಾಗಿರುತ್ತದೆ, ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಅನುಕೂಲ ಆಗಲಿದೆ ಎಂದು ಎಂಎಲ್ಸಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ವಿಧಾನ ಪರಿಷತ್ ಸದಸ್ಯರಿಗೆ ಬ್ರಹ್ಮಾವರ ಕೃಷಿ ವಿದ್ಯಾಲಯದ ಉನ್ನತೀಕರಣದ ಬಗ್ಗೆ ಉಡುಪಿ ಜಿಲ್ಲಾ ರೈತಸಂಘ ಹಾಗೂ ಕುಂದಾಪುರದ ಯುವ ಕಾಂಗ್ರೆಸ್ ವತಿಯಿಂದ ಮನವಿ ನೀಡಲಾಗಿದ್ದು ಇದಕ್ಕೆ ಶಾಸಕ ಭಂಡಾರಿ ಸ್ಪಂದಿಸಿ ಸಚಿವರಿಗೆ ವಿವರಿಸಿದ್ದರು.

Comments are closed.