
ಮಂಗಳೂರು: ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶ ವಿದೇಶದ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಪರಿಚಯ ಆಗಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಂಬಳ 9ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿಯ 9ನೇ ವರ್ಷದ ರಾಮ – ಲಕ್ಷ್ಮಣ ಜೋಡುಕರೆ ಕಂಬಳವು ಇದೇ ಬರುವ 27 ರಂದು ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ದ.ಕ ಜಿಲ್ಲೆಯ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.

ಈ ಬಗ್ಗೆ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಕಂಬಳದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರರಾದ ಚಿತ್ತರಂಜನ್ ಅವರು ದೀಪ ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೆಂದ್ರ ಸಹಿತ ಶಾಸಕರು, ಸಾಮಾಜಿಕ,ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಗರ ಪ್ರದೇಶದಲ್ಲಿ ನೆಲೆಸಿರುವ ಜನರಿಗೆ ನಮ್ಮ ತುಳುನಾಡಿನ ಕಂಬಳದ ಪರಿಚಯವಾಗಬೇಕು ಎಂದು ವಿಶೇಷವಾಗಿ ಈ ಬಾರಿ 9 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕ ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ.ವಂದೇ ಮಾತರಂ150ನೇ ವರ್ಷ ಆಚರಣೆಯ ನಿಮಿತ್ತ ಕಂಬಳದಲ್ಲಿ ವಂದೇ ಮಾತರಂ ಗಾಯನ ಮತ್ತು 150 ವಿದ್ಯಾರ್ಥಿನಿಯರಿಂದ ಸಾಮೂಹಿಕ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಪ್ರಧಾನಿ ಮೋದಿಯವರ ಆಶಯದಂತೆ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮದ ಅಂಗವಾಗಿ ಗಿಡ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಕ್ ಟು ಊರು ಅಭಿಯಾನದಡಿ 9 ಮಂದಿಯನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದರು.
ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಭಾಗವಾಗಿರುವ ಕಂಬಳ ನೂರಾರು ವರ್ಷಗಳ ಘನ ಪರಂಪರೆಯನ್ನು ಹೊಂದಿದ್ದು, ಈ ಮಣ್ಣಿನ ಧಾರ್ಮಿಕ ಕಟ್ಟುಕಟ್ಟಳೆಗಳೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ ಇಲ್ಲಿನ ಜನಜೀವನವನ್ನು ಪ್ರತಿಬಿಂಬಿಸುವ ಕೃಷಿಕ ಮತ್ತು ಜಾನುವಾರುಗಳ ಬದುಕಿನ ನಂಟಿನೊಂದಿಗೆ ಆರಂಭವಾದ ಸಾಂಪ್ರದಾಯಿಕ ಕ್ರೀಡೆಯು ಕಾಲಕ್ರಮೇಣ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ವಿಶ್ವವ್ಯಾಪಿಯಾಗಿ ಇನ್ನಷ್ಟು ಜನಪ್ರಿಯವಾಗುತ್ತ ಬಂದಿದೆ.
ಕಂಬಳವನ್ನು ನಿಷೇಧಿಸುವ ಮೂಲಕ ಇಲ್ಲಿನ ಮಣ್ಣಿನ ಮೂಲ ಸತ್ವಕ್ಕೆ ಕೊಡಲಿ ಏಟು ಕೊಟ್ಟು ನಮ್ಮ ಸಂಸ್ಕೃತಿಗೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ನಡೆದ ಪ್ರಬಲ ಹೋರಾಟದಲ್ಲಿ ಹುಟ್ಟಿಕೊಂಡ ಕಿಚ್ಚು ‘ಮಂಗಳೂರು ಕಂಬಳ’ವು ಇಂದು ನವೋತ್ಸಾಹದ ೯ನೇ ವರ್ಷಕ್ಕೆ ಹೆಜ್ಜೆಯನ್ನಿರಿಸಿದೆ. ಕಂಬಳ ಕ್ಷೇತ್ರವು ಇಂದು ಅನೇಕ ದಾಖಲೆಗಳ ಮೂಲಕ ಜನಾಕರ್ಷಣೆ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ ‘ಅಲೇ ಬುಡಿಯೆರ್’ ಎಂಬ ಝೇಂಕಾರವು ಮಾರ್ದನಿಸುವುದರ ಜೊತೆಗೆ ಕೋಣಗಳು ಓಡುವಾಗ ಕರೆಯ ನೀರು ಬಾನೆತ್ತರಕ್ಕೆ ಚಿಮ್ಮುವಂತೆ ಈ ಜನಪದ ಕ್ರೀಡೆಯ ಪರಿಮಳವು ಜಗದಗಲ ಪಸರಿಸಲಿ ಎಂಬ ಆಶಾವಾದದೊಂದಿಗೆ ಮಂಗಳೂರು ಕಂಬಳಕ್ಕೆ ಎಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ ಎಂದು ಸಂಸದರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಪ್ರಸಾದ್ ಕುಮಾರ್ ಶೆಟ್ಟಿ, ಮಂಗಲ್ಮಾಡಿ ನಂದನ್ ಮಲ್ಯ, ಕಿರಣ್ ಕೋಡಿಕಲ್, ಸಂಜಯ್ ಪ್ರಭು, ವಿಜಯ ಕುಮಾರ್ ,ವಸಂತ ಪೂಜಾರಿ, ಸುಜಿತ್ ಪ್ರತಪ್ ಕುಮಾರ್ , ಸಚಿನ್ ಶೆಟ್ಟಿ, ಈಶ್ವರ್, ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಕಂಬಳ ಕ್ರಿಯೇಟ್ ಮಾಡುವ ಸ್ಪರ್ಧೆಗಳು :
ಮಂಗಳೂರು ನಗರದಲ್ಲಿರುವ ವ್ಯದ್ಯಾಶ್ರಮದ ಹಿರಿಯ ಜೀವಗಳಿಗೆ ಕಂಬಳ ತೋರಿಸುವ ಕಾರ್ಯಕ್ರಮ, ಪೇಂಟಿಂಗ್, ರೀಲ್ಸ್ ಸ್ಪರ್ಧೆ, ಫೋಟೋಗ್ರಾಫಿ, Al ಮುಖಾಂತರ ಮಂಗಳೂರು ಕಂಬಳ ಕ್ರಿಯೇಟ್ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಕ್ಕಳು, ಹಿರಿಯರು, ಯುವಕರು ಹೀಗೆ ಎಲ್ಲರನ್ನೂ ಸೇರಿಸಿಕೊಂಡು ಕಂಬಳವನ್ನು ಸದಾಕಾಲ ನೆನಪಲ್ಲಿ ಉಳಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ”
1. ರಾಣಿ ಅಬ್ಬಕ್ಕ – ಚಾರಿತ್ರಿಕ ಚಿತ್ರಕಲಾ ಪ್ರದರ್ಶನ – ಪೋರ್ಚುಗೀಸರ ವಿರುದ್ಧ ದಿಟ್ಟತನದಿಂದ ಹೋರಾಟ ಮಾಡಿದ ತೌಳವ ಮಣ್ಣಿನ ಹೆಮ್ಮೆಯ ರಾಣಿ “ರಾಣಿ ಅಬ್ಬಕ್ಕ” ರವರ ಚಾರಿತ್ರಿಕ ಚಿತ್ರಕಲಾ ಪ್ರದರ್ಶನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕರಾಮ ಪೂಜಾರಿಯವರ ಸಹಯೋಗದಿಂದ ನಡೆಯಲಿದೆ.
2. ವಂದೇ ಮಾತರಂ 150 – ಸಾಮೂಹಿಕ ಗೀತ ಗಾಯನ – ಭಾರತ ಸ್ವಾತಂತ್ರದ ಧ್ಯೇಯ ಮಂತ್ರ ವಂದೇ ಮಾತರಂ ಗೀತೆಗೆ 150 ವರ್ಷ ಪೂರೈಸಿದ ಹಿನ್ನಲೆಯಲ್ಲಿ 150 ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಸಾಮೂಹಿಕ ಗೀತ ಗಾಯನ – ಬೆಳಿಗ್ಗೆ 8.30ಕ್ಕೆ ನಡೆಯಲಿದೆ.
3. ಮಂಗಳೂರು ಕಂಬಳ ಪ್ರಶಸ್ತಿ 2025 – ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ಬ್ಯಾಕ್ ಟು ಊರು’ ಪರಿಕಲ್ಪನೆಗೆ ಶಕ್ತಿ ತುಂಬುತ್ತಿರುವ 9 ಮಂದಿಗೆ ಮಂಗಳೂರು ಕಂಬಳ ಪ್ರಶಸ್ತಿ 2025 ನೀಡಿ ಗೌರವಿಸಲಾಗುವುದು.
4. ಏಕ್ ಪೇಡ್ ಮಾ ಕೆ ನಾಮ್ – ತಾಯಿಯ ಹೆಸರಿನಲ್ಲಿ ಒಂದು ಗಿಡ – ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನವ ಸಂಕಲ್ಪಗಳಲ್ಲಿ ಒಂದಾಗಿರುವ ‘ಏಕ್ ಪೇಡ್ ಮಾ ಕೆ ನಾಮ್ – ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
5. ವಿಶೇಷ ಸಾಮರ್ಥ್ಯ ಹಾಗೂ ಓಲ್ಡ್ ಏಜ್ಡ್ ಹೋಮ್ನಲ್ಲಿ ನೆಲೆಸಿರುವ ಮಂಗಳೂರು ನಗರ ಪರಿಸರದ ನಿವಾಸಿಗಳನ್ನು ಕರೆತಂದು ಕಂಬಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು.
6. ರಂಗ್ದ ಕೂಟ – ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆಯು ರಂಗ್ದ ಕಿನ್ಯ, ರಂಗ್ದ ಎಲ್ಯ, ರಂಗ್ದ ಮಲ್ಲ ಹಾಗೂ ರಂಗ್ದ ಕೂಟ ವಿಭಾಗಗಳಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ12.30ರ ತನಕ ನಡೆಯಲಿರುತ್ತದೆ.
7. ಮಂಗಳೂರು ಕಂಬಳ 2025 ರೀಲ್ಸ್ – ಮಂಗಳೂರು ಕಂಬಳದ ಕ್ಷಣಗಳನ್ನು ರೀಲ್ಸ್ ಮಾಡುವ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್ಗೆ ಬಹುಮಾನವನ್ನು ನೀಡಲಾಗುವುದು.
8. ಮಂಗಳೂರು ಕಂಬಳ ಫೋಟೊಗ್ರಾಫಿ – ಫೋಟೋಗ್ರಾಫಿ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ನುರಿತ ತೀರ್ಪುಗಾರರ ಮೂಲಕ ಆಯ್ಕೆಯಾದ ಚಿತ್ರಕ್ಕೆ ನಗದು ಬಹುಮಾನ ನೀಡಲಾಗುವುದು.
9 ಎಐ ಕ್ರಿಯೇಟಿವ್ ಎಡಿಷನ್ – ಕೃತಕ ಬುದ್ಧಿಮತ್ತೆ (ಎಐ) ಉಪಯೋಗಿಸಿ ಮಂಗಳೂರು ಕಂಬಳ ಕಲಾಕೃತಿಯ ರಚಿಸುವ ಸ್ಪರ್ಧೆ ನಡೆಯಲಿದ್ದು ಉತ್ತಮ ಕಲಾಕೃತಿಗೆ ಬಹುಮಾನ ನೀಡಲಾಗುವುದು.
Comments are closed.