ಕರಾವಳಿ

ಹಿರಿಯ ನೇತಾರ ಮಾಣಿ ಗೋಪಾಲ್ ಅವರ ಆತ್ಮಕಥನ ‘ನಾನು ಮಾಣಿಗೋಪಾಲ’ ಪುಸ್ತಕ ಬಿಡುಗಡೆ

Pinterest LinkedIn Tumblr

ಕುಂದಾಪುರ: ಮಾಣಿಗೋಪಾಲರು ಶ್ರೀ ಸಾಮಾನ್ಯರ ಜತೆಯಲ್ಲಿದ್ದುಕೊಂಡು, ಬಡವರ ಪರ, ಮೂರ್ತೆದಾರರ ಪರ ಹೋರಾಟ ಮಾಡಿದವರು. ಆ ಕಾಲದಲ್ಲಿ ಅಂತಹ ಹೋರಾಟ ಮಾಡಲು ಗಟ್ಟಿತನ ಇರಬೇಕು. ಬದುಕಿಗೊಂದು ಸ್ಪಷ್ಟ ನಿಲುವು ಬೇಕಿತ್ತು. ಅದೆರಡು ಅವರಲ್ಲಿತ್ತು. ಇಡೀ ಬದುಕಿನುದ್ದಕ್ಕೂ ಸತ್ಯ, ನ್ಯಾಯ, ಧರ್ಮದ ಪರ ಹೋರಾಡಿ, ರಾಜಕೀಯದಲ್ಲೂ ಶುದ್ಧ ಚಾರಿತ್ರ್ಯವನ್ನು ಉಳಿಸಿಕೊಂಡು, ಶುದ್ಧ ಹಸ್ತದ ರಾಜಕಾರಣಕ್ಕೆ ಹೆಸರಾದ ಕುಂದಾಪುರದ ಸಾಕ್ಷಿ ಪ್ರಜ್ನೆಯಂತಿದ್ದರು ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಹೇಳಿದರು.

ಅವರು ಶನಿವಾರ ಬೋರ್ಡ್ ಹೈಸ್ಕೂಲ್ ವಠಾರದ ರೋಟರಿ ಕಲಾಮಂದಿರದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ವತಿಯಿಂದ ಸಾಮಾಜಿಕ ಹೋರಾಟಗಾರ, ಹಿರಿಯ ನೇತಾರ ಮಾಣಿ ಗೋಪಾಲ್ ಅವರ ಆತ್ಮಕಥನ ‘ನಾನು ಮಾಣಿಗೋಪಾಲ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಅವರೊಂದಿಗೆ ನಮ್ಮ ಕುಟುಂಬಕ್ಕೆ ದೀರ್ಘಕಾಲದ ಒಡನಾಟವಿದೆ. ಬೇರೆ ಬೇರೆ ಪಕ್ಷದಲ್ಲಿದ್ದರೂ, ಸ್ನೇಹ, ವಿಶ್ವಾಸ ಇಂದಿಗೂ ಹಾಗೆಯೇ ಇದೆ. ಶಾಸಕರಾಗುವ ಯೋಗ್ಯತೆಯಿತ್ತು. ಆದರೆ ಯೋಗ ಮಾತ್ರ ಇರಲಿಲ್ಲ. ಅವರೊಬ್ಬ ಅಜಾತಶತ್ರುವಾಗಿದ್ದರು ಎಂದರು.

ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಮಾಣಿ ಗೋಪಾಲರು ಧ್ವನಿಯಿಲ್ಲದವರಿಗೆ ಧ್ವನಿಯಾದವರು. ಮೂರ್ತೆದಾರಿಕೆ ನಿಷೇಧ ಆದಾಗ ಸಹಿ ಮಾಡಲು ಸಹ ಬಾರದ ಮೂರ್ತೆದಾರರ ಪರ ಗಟ್ಟಿ ಧ್ವನಿಯಲ್ಲಿ ನಿಂತು ಹೋರಾಡಿದವರು. ಅವರ ಹೋರಾಟದ ಫಲವಾಗಿ ಬಂಗಾರಪ್ಪರು ಮುಖ್ಯಮಂತ್ರಿಯಾಗಿ ನಡೆಸಿದ ಮೊದಲ ಸಂಪುಟ ಸಭೆಯಲ್ಲಿಯೇ ನಿಷೇಧವನ್ನು ವಾಪಾಸು ತೆಗೆದುಕೊಂಡರು ಎಂದು ನೆನಪಿಸಿಕೊಂಡರು.

ವ್ಯಕ್ತಿತ್ವಕ್ಕೆ ಯಾವಾಗ ಬೆಲೆ ಬರುವುದೆಂದರೆ ಜನರ ಮಧ್ಯೆಯೇ ಇದ್ದುಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ. ಅದಕ್ಕೆ ಅರ್ಹರಾದವರು ಮಾಣಿ ಗೋಪಾಲರು. ಸಮ ಸಮಾಜದ ಪರ ವಾದಿಸುತ್ತಿದ್ದ ಅವರಂತವರು ವಿಧಾನಸಭೆಯಲ್ಲಿ ಇರಬೇಕಿತ್ತು ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿದರು. ಮಾಣಿಗೋಪಾಲ್ ಹಾಗೂ ಗಿರಿಜಾ ದಂಪತಿಯನ್ನು ಸಮ್ಮಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್. ಎನ್. ಹೆಬ್ಬಾರ್, ಕಸಾಪ ತಾಲೂಕು ಅಧ್ಯಕ್ಷ ಡಾ| ಉಮೇಶ್ ಪುತ್ರನ್, ಪುರಸಭೆ ಅಧ್ಯಕ್ಷ ಮೋಹನದಾಸ್ ಶೆಣೈ, ಪುಸ್ತಕ ರಚಿಸಿದ ಕೇಶವ ಸಸಿಹಿತ್ಲು, ಪುತ್ರ ರಂಜನ್ ಮಾಣಿಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.

ಕಸಾಪದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಸಿದರು. ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಮನೋಹರ್ ಭಟ್ ವಂದಿಸಿದರು. ಕುಂದಪ್ರಭದ ಯು.ಎಸ್.ಶೆಣೈ ಪುಸ್ತಕ ಪರಿಚಯಿಸಿದರು. ದಿನಕರ ಆರ್. ಶೆಟ್ಟಿ, ಮಂಜುನಾಥ ಕೆ.ಎಸ್., ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

Comments are closed.