ಕರಾವಳಿ

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ‘ಮಾಂಗಲ್ಯ’ ಸರ ಸುಲಿಗೆ ಪ್ರಕರಣ: ಕುಂದಾಪುರ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್‌ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ಕಡೆಗೆ ಸರ್ವಿಸ್‌ ರಸ್ತೆಯಲ್ಲಿ ಅ.3ರಂದು ಸಂಜೆ ಮಹಿಳೆಯೋರ್ವರು ತನ್ನ ಮಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕೆ.ಟಿ.ಎಂ ಬೈಕ್‌ನಲ್ಲಿ ಬಂದ  ಇಬ್ಬರು ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ ಪ್ರಕರಣದ ಬೆನ್ನುಹತ್ತಿದ ಕುಂದಾಪುರ ಪೊಲೀಸರ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಈ ಪ್ರಕರಣದ ತನಿಖಾಧಿಕಾರಿಯಾದ ಕುಂದಾಪುರ ಪೊಲೀಸ್ ಠಾಣೆ ಪ್ರಭಾರ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ ತನಿಖೆಯನ್ನು ಕೈಗೊಂಡಿದ್ದು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿದ್ದರು.

ಆರೋಪಿಗಳಾದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಸಂಜಯ್‌ ಎಲ್‌ (33) ಎಂಬಾತನನ್ನು ಶಿವಮೊಗ್ಗ ಜಿಲ್ಲೆಯ  ತೀರ್ಥಹಳ್ಳಿಯ ಮುಡಬಾ ಕ್ರಾಸ್‌ ಬಳಿ ವಶಕ್ಕೆ ಪಡೆದಿದ್ದು ಇನ್ನೊಬ್ಬ ಆರೋಪಿ ದಾವಣಗೆರೆ‌ ಜಿಲ್ಲೆ ವಿನೋಬನಗರದ ವಸಂತ ಕುಮಾರ್‌ (30) ಎಂಬಾತನನ್ನು ದಾವಣಗೆರೆ ಮಲೆ ಬೆನ್ನೂರು ಎಂಬಲ್ಲಿ ಬಂಧಿಸಲಗಿದೆ. ಆರೋಪಿಗಳಿಂದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ, ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದ್ದು ಈ ಸ್ವತ್ತುಗಳ  ಒಟ್ಟು ಮೌಲ್ಯ  8 ಲಕ್ಷದ 20 ಸಾವಿರ ಆಗಿದೆ.

ಕುಂದಾಪುರ ಡಿವೈಎಸ್ಪಿ ಹೆಚ್‌.ಡಿ ಕುಲಕರ್ಣಿ, ಉಡುಪಿ ಡಿವೈಎಸ್ಪಿ ಡಿ.ಟಿ ಪ್ರಭು ಮಾರ್ಗದರ್ಶನದಂತೆ  ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕರಾದ ಜಯರಾಮ ಡಿ. ಗೌಡರವರ ನೇತೃತ್ವದಲ್ಲಿ ಕುಂದಾಪುರ ಠಾಣಾ ಪಿಎಸ್ಐಗಳಾದ  ನಂಜಾನಾಯ್ಕ್‌ ಎನ್‌., ಪುಷ್ಪಾ, ಮತ್ತು ಕುಂದಾಪುರ ಸಂಚಾರ ಠಾಣಾ ಪಿಎಸ್ಐ ನೂತನ್‌ ಹಾಗೂ ಎಎಸ್ಐ ಮೋನ ಪೂಜಾರಿ, ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌‌ಗಳಾದ ಮೋಹನ್‌, ಸಂತೋಷ, ಪ್ರಿನ್ಸ್‌,  ಮಂಜುನಾಥ ಹಾಗೂ ಕಾನ್ಸ್‌ಟೇಬಲ್‌‌ಗಳಾದ  ಘನಶ್ಯಾಮ, ಲೋಹಿತ್‌, ಮೌನೇಶ್‌,  ಕಿಶನ್‌, ರಾಜು ಭೋವಿ, ಮಹಾಬಲ, ರಾಘವೇಂದ್ರ ಗೌತಮ್‌, ನಾಗಶ್ರೀ ಹಾಗೂ ಕುಂದಾಪುರ ವೃತ್ತ ಕಚೇರಿಯ ಅಣ್ಣಪ್ಪ ಮೊದಲಾದವರಿದ್ದರು.

Comments are closed.