ಕರಾವಳಿ

ಸೌಪರ್ಣಿಕಾ ನದಿಯಲ್ಲಿ ಮುಳುಗಿದ್ದ ಮಹಿಳೆಯ ಮೃತದೇಹ ಪತ್ತೆಗೆ 72 ಗಂಟೆ ಕಾಲ ಕಾರ್ಯಾಚರಣೆ ನಡೆಸಿದ್ದ ತಂಡಕ್ಕೆ ಪ್ರಶಂಸನಾ ಪತ್ರ ನೀಡಿದ ಕುಂದಾಪುರ ಡಿವೈಎಸ್ಪಿ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಸೌರ್ಪಣಿಕಾ ನದಿ ಬಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆ ವಸುಧಾ ಚಕ್ರವರ್ತಿ(46) ಶವವಾಗಿ ಪತ್ತೆಯಾಗಿದ್ದು ಮೃತದೇಹವನ್ನು ತೀವ್ರ ಹುಡುಕಾಟ ನಡೆಸಿ 72 ಗಂಟೆಗಳ ಕಾರ್ಯಾಚರಣೆ ಬಳಿಕ  ಸೌಪರ್ಣಿಕಾ ತಟದಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿ ಪತ್ತೆ ಮಾಡಿದ ತಂಡ ಮತ್ತು ದುರ್ಗಮ ಕಾಡು ಹಾದಿಯಲ್ಲಿ ಮೃತದೇಹವನ್ನು ಕೊಲ್ಲೂರಿಗೆ ತರಲು ಸಹಕರಿಸಿದವರಿಗೆ ಕುಂದಾಪುರ ಪೊಲೀಸ್ ಇಲಾಖೆಯಿಂದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಚಿನ್ ಜಿ., ರವಿ ಮಂಜುನಾಥ್ ಗೌಡ,‌ ಮುಳುಗುತಜ್ಞ ಈಶ್ವರ್ ಮಲ್ಪೆ, ಹರೀಶ್ ಪೂಜಾರಿ, ಗಂಗೊಳ್ಳಿ ಆಪತ್ಬಾಂಧವ‌ 24*7 ಇಬ್ರಾಹಿಂ ಗಂಗೊಳ್ಳಿ, ಸ್ಥಳೀಯರಾದ ಪ್ರದೀಪ್ ಭಟ್ ಸಂಪ್ರೆ, ನಾಗರಾಜ್ ನಾಯ್ಕ್ ಬಾವಡಿ, ಉಮೇಶ್ ಭಟ್ ಗೊಳಿಗುಡ್ಡೆ ಹಾಗೂ ಇವರೊಂದಿಗೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಕೊಲ್ಲೂರು ಠಾಣಾಧಿಕಾರಿ ವಿನಯ್ ಎಂ. ಕೊರ್ಲಹಳ್ಳಿ ಸಹಿತ ಇತರ ಸಿಬ್ಬಂದಿ ಹಾಗೂ ನಾಗರಿಕರನ್ನು ಡಿವೈಎಸ್ಪಿ ಶ್ಲಾಘಿಸಿದರು.

ಮಳೆಯ ನಡುವೆ ಮೃತದೇಹವನ್ನು ಮೂರು ಕಿ.ಮೀ. ದೂರ ಹೊತ್ತುತಂದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಉಡುಪಿ ಎಸ್ಪಿ ಹರಿರಾ‌ಂ ಶಂಕರ್ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬೈಂದೂರು ವೃತ್ತ ನಿರೀಕ್ಷಕ ನಿಲೇಶ್ ಚೌಹಾಣ್, ಕುಂದಾಪುರ ಗ್ರಾಮಾಂತರ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ ಮೊದಲಾದವರಿದ್ದರು.

Comments are closed.