ಕರಾವಳಿ

ಬ್ರಹ್ಮಾವರ(ಹಿಲಿಯಾಣ): ಮೊಬೈಲ್ ಬಳಕೆ ವಿಚಾರದಲ್ಲಿ ಸಿಟ್ಟುಗೊಂಡು ಹೆಂಡತಿಯನ್ನೇ ಕಡಿದು ಕೊಂದ ಪತಿ!

Pinterest LinkedIn Tumblr

ಉಡುಪಿ: ಪತ್ನಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಾಳೆಂದು ಕೋಪಗೊಂಡು ಗಲಾಟೆ ಮಾಡಿ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಘಟನೆ ಜೂ.19 ರಾತ್ರಿ 11.30ಕ್ಕೆ ನಡೆದಿದ್ದು ಕೊಲೆ‌ಮಾಡಿ ಆರೋಪಿ ಪರಾರಿಯಾಗಿದ್ದ. ರೇಖಾ‌(27) ಕೊಲೆಯಾದ ಮಹಿಳೆ. ಕೊಳಂಬೆ ಗ್ರಾಮದ ನಿವಾಸಿಯಾದ ಆರೋಪಿ ಗಣೇಶ ಪೂಜಾರಿ(42) ಸದ್ಯ ಬಂಧಿಸಲಾಗಿದೆ.

ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ 8 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. ರೇಖಾ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸಕ್ಕಿದ್ದು ಗಣೇಶ್ ಮೊಬೈಲ್ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಈ ಹಿಂದೆ ಶಂಕರನಾರಾಯಣ ಪೊಲೀಸರಿಗೆ ದೂರು ಅರ್ಜಿ ನೀಡಲಾಗಿದ್ದು ಅವರು ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಆದರೆ ಗಣೇಶ್ ತನ್ನ ಚಾಳಿ ಮುಂದುವರೆಸಿದ್ದು ಗುರುವಾರ ತಡರಾತ್ರಿ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿದ್ದ. ಪತ್ನಿಗೆ ಕತ್ತಿಯಿಂದ ಕಡಿದಿದ್ದು ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಕುಂದಾಪುರ ವೃತ್ತನಿರೀಕ್ಷಕ ಜಯರಾಮ್ ಗೌಡ, ಶಂಕರನಾರಾಯಣ ಪೊಲೀಸ್ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ಸಿಬ್ಬಂದಿಗಳು ಪತ್ತೆಮಾಡಿ ಬಂಧಿಸಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.