ಕರಾವಳಿ

ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತದಲ್ಲಿ ಮೃತಪಟ್ಟ ಹೆಬ್ರಿಯ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಸರ್ಕಾರದ 25 ಲಕ್ಷ ನೆರವಿನ ಚೆಕ್‌ ಹಸ್ತಾಂತರ

Pinterest LinkedIn Tumblr

ಉಡುಪಿ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತರಾದ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಚಿನ್ಮಯಿ ಶೆಟ್ಟಿ ಕುಟುಂಬ ದುಃಖತಪ್ತವಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಈ ಕುಟುಂಬ ಮೂಲತಃ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಸದ್ಯ ವಾಸ್ತವ್ಯ ಹೂಡಿದ್ದಾರೆ. ಸಂತ್ರಸ್ತೆಯ ಮನೆಗೆ ಭೇಟಿ ನೀಡಿರುವ ಉಡುಪಿ ಜಿಲ್ಲಾಡಳಿತ ಸರಕಾರದ ವತಿಯಿಂದ ಘೋಷಿಸಿದ 25 ಲಕ್ಷ ರೂಪಾಯಿ ಪರಿಹಾರ ಹಣದ ಚೆಕ್ ಅನ್ನು ಕುಂಟುಂಬಿಕರಿಗೆ ನೀಡಿದೆ.

ಕಾಲ್ತುಳಿತ ಪ್ರಕರಣದಲ್ಲಿ ಘೋಷಿತ ಪರಿಹಾರ ನೀಡಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ. ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಲಾಗುತ್ತಿದೆ. ಮೃತ 11 ಮಂದಿಯ ಪೈಕಿ ಚಿನ್ಮಯಿ ಶೆಟ್ಟಿ ಪ್ರಥಮ ವರ್ಷದ ಬಿಇ ವಿದ್ಯಾರ್ಥಿನಿಯಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಚಿನ್ಮಯಿ ಕುಟುಂಬ ಕರಾವಳಿ ಮೂಲವನ್ನು ಹೊಂದಿದೆ. ಸದ್ಯ ಚಿನ್ಮಯಿ ಶೆಟ್ಟಿ ಅವರ ತಾಯಿ ಪೂಜಾ ಅವರ ಮೂಲ ಮನೆಯಲ್ಲಿ ಕುಟುಂಬ ನೆಲೆಸಿದೆ. ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಸಂತ್ರಸ್ತ ಕುಟುಂಬವನ್ನು ಉಡುಪಿ ಜಿಲ್ಲಾಡಳಿತ ಭೇಟಿ ಮಾಡಿದೆ. ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ನೇತೃತ್ವದಲ್ಲಿ ತೆರಳಿ, ಸರ್ಕಾರ ಘೋಷಿಸಿರುವ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ. ಆಘಾತದಲ್ಲಿರುವ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದ್ದು, ಮುಂದೆಯೂ ನಿಮ್ಮ ಕುಟುಂಬದ ಜೊತೆ ಸರಕಾರ ಇರಲಿದೆ ಎಂದು ಭರವಸೆ ನೀಡಿದ್ದಾರೆ.

ಚಿನ್ಮಯಿ ಶೆಟ್ಟಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಕರಾವಳಿ ಮೂಲದ ಈಕೆ ಸಹಜವಾಗಿಯೇ ಯಕ್ಷಗಾನದಲ್ಲಿ ವಿಶೇಷ ಅಭಿರುಚಿ ಹೊಂದಿದ್ದರು. ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದ ಈಕೆ, ಕ್ರಿಕೆಟ್‌ನಲ್ಲಿ ವಿಶೇಷ ಆಸಕ್ತಿ ಇಲ್ಲವಾದರೂ, ಸ್ನೇಹಿತರ ಜೊತೆ ಸಂಭ್ರಮಾಚರಣೆ ನೋಡಲು ಹೋದಾಗ ದುರ್ಘಟನೆ ನಡೆದಿದೆ ಎಂದು ತಂದೆ ತಿಳಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ ತಂದೆ ಕರುಣಾಕರ ಶೆಟ್ಟಿ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಮನವಿ ಮಾಡಿದರು. ಪ್ರಕರಣದ ಗಂಭೀರ ತನಿಖೆ ಆಗಬೇಕು, ಸಿಬಿಐಗೆ ನೀಡಿದರೆ ಉತ್ತಮ ಎಂದರು. ನಾವು ಮಗಳನ್ನು ಕಳೆದುಕೊಂಡ ನೋವು ನಿರಂತರ ಎಂದು ದುಃಖ ತಪ್ತರಾದರುm

ಬೆಂಗಳೂರಿನ ತಿಪ್ಪಸಂದ್ರದಲ್ಲಿ ನೆಲೆಸಿರುವ ಚಿನ್ಮಯಿ ಅವರ ಕುಟುಂಬಚು ಮಗಳ ಅಂತಿಮ ಕಾರ್ಯಗಳನ್ನು ನೆರವೇರಿಸಲು ಅಜ್ಜಿ ಮನೆ ಹೆಬ್ರಿ ತಾಲ್ಲೂಕಿನ ಮದಗದ ಮನೆಗೆ ಬಂದಿದೆ. ಹಾಗಾಗಿ ಹೆಬ್ರಿಗೆ ಬಂದು ಪರಿಹಾರದ ಚೆಕ್‌ ಹಸ್ತಾಂತರಿಸಲಾಗಿದೆ. ಎಸ್.ಪಿ ಹರಿರಾಮ್ ಶಂಕರ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಹೆಬ್ರಿ ತಹಶೀಲ್ಧಾರ್‌ ಎಸ್‌. ಎ. ಪ್ರಸಾದ್‌ ಉಪಸ್ಥಿತರಿದ್ದರು.

Comments are closed.