ಕುಂದಾಪುರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಭವಿಷ್ಯದಲ್ಲಿ ಸತ್ಪ್ರಜೆಗಳಾಗಬೇಕು. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆಗಳಿತ್ತು. ಆದರೆ ಪ್ರಸ್ತುತ ಎನ್.ಜಿ.ಓ.ಗಳು, ಸಂಘಟನೆಗಳು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕು. ಜೀವನದಲ್ಲಿ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಉದ್ಯೋಗ ಸಿಕ್ಕ ಬಳಿಕ ತಾವು ಕೂಡ ಅಗತ್ಯವುಳ್ಳ ಮಕ್ಕಳ ವಿದ್ಯೆಗೆ ಸಹಕಾರ ನೀಡಬೇಕು ಎಂದು ಎಲ್.ಜಿ ಪೌಂಡೇಶನ್ ಕುಂದಾಪುರದ ಮ್ಯಾನೇಜಿಂಗ್ ಟ್ರಸ್ಟಿ ಕುಂದಾಪುರದ ನಾಗರಾಜ ಡಿ. ಪಡುಕೋಣೆ ಹೇಳಿದರು.

ಜನಶಕ್ತಿ ಸೇವಾ ಟ್ರಸ್ಟ್ (ರಿ) ನಾಡ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಪಡುಕೋಣೆ ಘಟಕ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಾಡ ವಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಾಡ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ 2025ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 90% ಕ್ಕೂ ಅಧಿಕ ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನಶಕ್ತಿ ಸೇವಾ ಟ್ರಸ್ಟ್ (ರಿ) ನಾಡ ಇದರ ಅಧ್ಯಕ್ಷ ಫಿಲಿಪ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭೆ ಎನ್ನುವುದು ಅದ್ಭುತವಾಗಿದ್ದು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಹೊರೆತೆಗೆಯಲು ಸೂಕ್ತ ವೇದಿಕೆ, ಪ್ರೋತ್ಸಾಹ ಅಗತ್ಯ. ನಗರ ಪ್ರದೇಶಗಳಲ್ಲಿ ಪ್ರತಿಭೆ ಅರಳಲು ಸಾಕಷ್ಟು ಅವಕಾಶಗಳಿದೆ. ಆದರೆ ಗ್ರಾಮೀಣ ಭಾಗದಲ್ಲಿ ಬೆಳೆಯುವ ಚೇತನಗಳಿಗೆ ಗುರುತಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಕಳೆದ 4 ವರ್ಷಗಳಿಂದ ನಾಡ ಭಾಗದಲ್ಲಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
ಇದೇ ಸಂದರ್ಭ ನಾಗಾರಾಜ್ ಡಿ. ಪಡುಕೋಣೆ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ %90 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಾಡ ವಲಯಾಧ್ಯಕ್ಷೆ ಮನೋರಮ ಭಂಡಾರಿ, ಕಾರ್ಯದರ್ಶಿ ಶೋಭಾ ಕೆರೆಮನೆ, ರಾಜ್ಯ ಮುಖಂಡರಾದ ಶೀಲಾವತಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಪಡುಕೋಣೆ ಘಟಕಾಧ್ಯಕ್ಷ ನಾಗರಾಜ ಕುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗಾರಾಜ ರಾಯಪ್ಪನಮಠ ಮೊದಲಾದವರಿದ್ದರು.
ಜನಶಕ್ತಿ ಸೇವಾ ಟ್ರಸ್ಟ್ ನಾಡದ ಕಾರ್ಯದರ್ಶಿ ರಾಜೀವ ಪಡುಕೋಣೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿ.ವೈ.ಎಫ್.ಐ ಪಡುಕೋಣೆಯ ಕಾರ್ಯದರ್ಶಿ ರಾಜೇಶ್ ಪಡುಕೋಣೆ ಸ್ವಾಗತಿಸಿ, ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ನಿರೂಪಿಸಿ, ನಾಗರಾಜ ಕುರು ವಂದಿಸಿದರು.
Comments are closed.