ಕುಂದಾಪುರ: ಮಳೆಗಾಲದಲ್ಲಿ ಅಥವಾ ಕಟ್ಟಿಗೆ ಅಭಾವ ಮೊದಲಾದ ಸಮಸ್ಯೆಗಳಿಂದ ಶವ ಸಂಸ್ಥಾರಕ್ಕೆ ತೊಂದರೆಯಾಗುತ್ತಿರುವುದರಿಂದ ವಿದ್ಯುತ್ ಚಿತಾಗಾರದಿಂದ ಮೃತದೇಹ ದಹಿಸಲು ಸಹಕಾರಿಯಾಗಲಿದೆ. ಜನಪ್ರತಿನಿಧಿಗಳಾದವರಿಗೆ ಇಂತಹ ಸ್ಥಳಗಳಿಗೆ, ಸರಕಾರಿ ಶಾಲೆಗಳಿಗೆ ಸರಕಾರದ ಅನುದಾನ ನೀಡಿದಾಗ ತೃಪ್ತಿ ಮತ್ತು ಇಂತಹ ಸ್ಥಳಗಳಿಗೆ ಬಂದಾಗ ಧನ್ಯತಾ ಭಾವನೆ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ ಮತ್ತು ಗ್ರಾಮ ಪಂಚಾಯತ್ ಕೋಟೇಶ್ವರ ಇದರ ವತಿಯಿಂದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೋಟೇಶ್ವರ ಗ್ರಾಪಂ.ನ ನಿಧಿಯಿಂದ ಸುಮಾರು 96 ಲಕ್ಷ ರೂ. ವೆಚ್ಚದಲ್ಲಿ ಕೋಟೇಶ್ವರದ ಹಿಂದು ರುದ್ರಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿದ್ಯುತ್ ಚಿತಾಗಾರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೋಟೇಶ್ವರದಲ್ಲಿ ಸುಮಾರು 100 ವರ್ಷಗಳಲ್ಲಿ ಹಲವಾರು ಸ್ವರೂಪ, ಬದಲಾವಣೆಗಗೊಂಡು ರುದ್ರಭೂಮಿ ಇದೀಗ ಆಧುನಿಕ ಸ್ಪರ್ಶತೆಯನ್ನು ಪಡೆದಿದೆ. ಹಿರಿಯ ರಾಜಕೀಯ ಮುತ್ಸದ್ದಿ ಪ್ರತಾಪಚಂದ್ರ ಶೆಟ್ಟಿ ಅವರು ಮುಂದಾಲೋಚನೆ ಮಾಡಿ ಅವರ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ, ಸರಕಾರದ ನೆರವಿನೊಂದಿಗೆ ಸ್ಥಳೀಯಾಡಳಿತದ ನೇತೃತ್ವದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಿರುವುದು ಉತ್ತಮ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಿದ್ಯುತ್ ಚಿತಾಗಾರದ ನಿರ್ವಹಣೆ ಸುಲಭವಾಗಬೇಕಾದರೆ ಬೈಂದೂರು, ಬ್ರಹ್ಮಾವರ ಸಹಿತ ಜಿಲ್ಲೆಯಲ್ಲಿ ಉಪಯೋಗ ಹೆಚ್ಚಾಗಬೇಕು. ಇದರ ಬಗ್ಗೆ ಮಾಹಿತಿ ನೀಡಿದಾಗ ಹೆಚ್ಚಿನ ಜನರು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ವಿದ್ಯುತ್ ಚಿತಾಗಾರ ನಿರಂತರವಾಗಿ ಉತ್ತಮ ವ್ಯವಸ್ಥೆಯಲ್ಲಿ ಮುಂದುವರಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಅದಕ್ಕೆ ಬೇಕಾಗುವ ವ್ಯವಸ್ಥೆಗಳನ್ನು ಮಾಡುವಲ್ಲಿ ಗ್ರಾ.ಪಂ. ಸಹಿತ ಎಲ್ಲರೂ ಸಹಕಾರ ನೀಡಬೇಕು. ವಿದ್ಯುತ್ ಚಿತಾಗಾರದ ನಿರ್ವಹಣೆ ಬಗ್ಗೆ ಸಂಬಂದಪಟ್ಟವರ ಸಭೆ ಕರೆದು ಅಗತ್ಯ ಕ್ರಮವಹಿಸೋಣ ಎಂದರು.
ಇದೇ ಸಂದರ್ಭ ಗಣೇಶ ಎಂ.ಕಾಮತ್, ರಂಗನಾಥ ಭಟ್, ಸುರೇಂದ್ರ ಮಾರ್ಕೋಡು, ಗುತ್ತಿಗೆದಾರ ಕೆದೂರು ಸದಾನಂದ ಶೆಟ್ಟಿ, ನಿರ್ಮಿತಿ ಕೇಂದ್ರದ ಅಭಿಯಂತರ ಮಹೇಶ್, ತಾಂತ್ರಿಕ ನಿರ್ವಹಣೆಗಾರ ನಾಗರಾಜ ಬೆಂಗಳೂರು, ವಿಠಲದಾಸ ಭಟ್, ರಾಜಶೇಖರ ಶೆಟ್ಟಿ, ಕೆ.ಜಿ.ವೈದ್ಯ, ಗುರುರಾಜ್ ರಾವ್ ಮತ್ತು ರತ್ನಾಕರ ಕಾಮತ್ ಅವರನ್ನು ಗೌರವಿಸಲಾಯಿತು.
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಹಿಂದು ರುದ್ರ ಭೂಮಿ ಸ್ಥಾಪಕ ಅಧ್ಯಕ್ಷ ಗಣೇಶ ಎಂ.ಕಾಮತ್, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಕೋಟೇಶ್ವರ ಗ್ರಾಪಂ ಉಪಾಧ್ಯಕ್ಷೆ ಆಶಾ, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ ಹೆಗ್ಡೆ ಮೊಳಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೊ ಇದ್ದರು.
ಕೋಟೇಶ್ವರ ಗ್ರಾ.ಪಂ ಪಿಡಿಒ ದಿನೇಶ ನಾಯ್ಕ್ ಸ್ವಾಗತಿಸಿದರು. ಹಿಂದು ರುದ್ರಭೂಮಿ ಸದಸ್ಯ ರಾಜಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.
Comments are closed.