ಕರಾವಳಿ

ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಮಫ್ತಿಯಲ್ಲಿ ಕುಂದಾಪುರದ ಕೋಡಿಗೆ ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Pinterest LinkedIn Tumblr

ಕುಂದಾಪುರ: ತಿಮಿಂಗಿಲದ ವಾಂತಿ (ಅಂಬರ್‌ ಗ್ರೀಸ್‌) ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳದ (ಫಾರೆಸ್ಟ್‌ ಸಿಐಡಿ) ಅಧಿಕಾರಿಗಳ ತಂಡವೊಂದು ಬುಧವಾರ ಕೋಡಿ ಕಡಲ ತೀರದ ಸಮೀಪದ ಎಂ. ಕೋಡಿಯ ಸೌಹಾರ್ದ ಭವನಕ್ಕೆ ಮಾರುವೇಷದಲ್ಲಿ (ಮಫ್ತಿ) ಬಂದು ದಾಳಿ ನಡೆಸಿದೆ. ಇವರನ್ನು ನಕಲಿ ಅಧಿಕಾರಿಗಳೆಂದು ಭಾವಿಸಿದ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನದ ಸುಮಾರಿಗೆ ಅರಣ್ಯ ಸಂಚಾರಿ ದಳದವರು 3 ಕಾರಿನಲ್ಲಿ ಕಾರ್ಯಾಚರಣೆ ನಡೆಸಲು ಬಂದಿದ್ದರು. ಈ ವೇಳೆ ನಾಲ್ವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ಇವರು ಮಾರುವೇಷದಲ್ಲಿ ಇದ್ದುದರಿಂದ ಸ್ಥಳೀಯರು ತಪ್ಪು ಭಾವಿಸಿ, ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿ 7 ಮಂದಿ ಇದ್ದು, ಒಬ್ಬನಲ್ಲಿ 10 ಕೆ.ಜಿ. ತೂಕದ ಅಂಬರ್‌ಗ್ರೀಸ್‌ ಇತ್ತು. ಅದನ್ನು ಮತ್ತೂಬ್ಬ ಹಿಡಿದುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ಮಂಗಳೂರು ವಿಭಾಗದ ಪಿಎಸ್‌ಐ ಜಾನಕಿ, ಸಿಬಂದಿ ವರ್ಗದ ಜಗದೀಶ್‌ ಸಾಲ್ಯಾನ್‌, ತಾರಾನಾಥ, ಅಬ್ದುಲ್‌ ರೌಫ್, ಶಿವಾನಂದ, ಬೆಂಗಳೂರು ವೈಲ್ಡ್‌ಲೈಫ್ ಕಂಟ್ರೋಲ್‌ ಬ್ಯೂರೋದ ಪ್ರಸಾದ್‌ ಎಸ್‌., ಮಾಹಿತಿ ದಾರರಾದ ಶಾಬಾಸ್‌, ಶಂಕರ್‌ ಅವರಿ ದ್ದರು. ಗಾಯಗೊಂಡವರು ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯಕರ, ರತ್ನಾಕರ, ಅಬೂಬಕರ್‌, ಆಸಿಫ್, ಹೆಸರು ತಿಳಿಯದ ಮೂವರು ಸಹಿತ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕುಂದಾಪುರ ಎಸ್‌ಐ ನಂಜ ನಾಯ್ಕ, ಸಿಬಂದಿ ಉಪಸ್ಥಿತರಿದ್ದರು.

ಪಿಸ್ತೂಲ್‌ನಿಂದ ಬೆದರಿಸಿದ ಆರೋಪ
ಮಾರುವೇಷದಲ್ಲಿ ಬಂದ ಅಧಿಕಾರಿಗಳು ಇಲ್ಲಿಗೆ ಬಂದು ಪಿಸ್ತೂಲ್‌ ತೋರಿಸಿ ಬೆದರಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಬೆದರಿ ಹಲ್ಲೆಗೆ ಮುಂದಾಗಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.

Comments are closed.