ಕುಂದಾಪುರ: ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾ ನಿವಾಸಿ ನದೀಮ್ (27), ಗಂಗೊಳ್ಳಿಯ ಜಾಮೀಯಾ ಮೊಹಲ್ಲಾ ನಿವಾಸಿ ಮೊಹಮ್ಮದ್ ಆರೀಫ್(18), ಭಟ್ಕಳದ ಚೌಥನಿ ರಸ್ತೆ ಸಮೀಪದ ನಿವಾಸಿ ಮೊಹಮ್ಮದ್ ರಯ್ಯಾನ್ (18) ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾದ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಬಾಲನ್ಯಾಯ ಮಂಡಳಿ ಎದುರು ಹಾಜರು ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ ಮೊಬೈಲ್ ಫೋನ್, 52,000 ರೂ. ನಗದು ಹಾಗೂ 1ಬೈಕ್, 1ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ.
ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್ ನಲ್ಲಿ ಎಮ್.ಎಮ್ ಕಲೆಕ್ಷನ್ ಬಟ್ಟೆ ಅಂಗಡಿ ಹಾಗೂ ಫ್ಯಾನ್ಸಿ ಅಂಗಡಿ ಹೊಂದಿರುವ ಗಂಗೊಳ್ಳಿಯ ಜೆ.ಎಮ್ ರೋಡ್ ನಿವಾಸಿ ರಿಜ್ವಾನ್ ಮಾರ್ಚ್ 31 ರ ಸಂಜೆ ತಮ್ಮ ಅಂಗಡಿಯ ಸಿಬ್ಬಂದಿಗಳೊಂದಿಗೆ ಮಸೀದಿಗೆ ಪ್ರಾರ್ಥನೆಗಾಗಿ ತೆರಳಿದ್ದರು. ಇದೇ ಸಮಯದಲ್ಲಿ ಅಗಡಿಯ ಬಾಗಿಲು ತೆರೆದು ಒಳ ಪ್ರವೇಶಿಸಿದ ಆರೋಪಿತರು ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿದ್ದ 90,000 ನಗದು ಹಾಗೂ ಮೊಬೈಲ್ ಫೋನ್ ಕಳವುಗೈದು ಪರಾರಿಯಾಗಿದ್ದರು. ರಿಜ್ವಾನ್ ಹಾಗೂ ಸಿಬ್ಬಂದಿಗಳು ಪ್ರಾರ್ಥನೆ ಮುಗಿಸಿ ಅಂಗಡಿಗೆ ಮರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.
ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಅಕ್ಕಪಕ್ಕದಲ್ಲಿನ ಅಂಗಡಿಗಳಲ್ಲಿನ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸರ ತಂಡ ಕಳ್ಳತನ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದು ಉಡುಪಿ ಎಸ್ಪಿ ಡಾ. ಅರುಣ್ ಕೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತೃತೇಜ್ ಪಿ.ಡಿ, ಗಂಗೊಳ್ಳಿ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಹರೀಶ್ ಆರ್, ತನಿಖಾ ಪಿಎಸ್ಐ ಬಸವರಾಜ ಕನಶೆಟ್ಟಿ, ಸಿಬ್ಬಂದಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್ ಕುರಣಿ ಹಾಗೂ ಸತೀಶ್ ಭಾಗಹಿಸಿದ್ದರು.
Comments are closed.