ಕರಾವಳಿ

ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯಕ್ಕೆ ಅಣಿಯಾದ ಉಡುಪಿ: ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಸಹಸ್ರಾರು ಭಕ್ತರು

Pinterest LinkedIn Tumblr

ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವ ಸಂಭ್ರಮಕ್ಕೆ ಉಡುಪಿ ನಗರ ಅಣಿಗೊಂಡಿದದ್ದು, ಕೃಷ್ಣ ಮಠ ರಥಬೀದಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ.

ವಿವಿಧ ಜಿಲ್ಲೆ, ಹೊರ ರಾಜ್ಯ, ವಿದೇಶದಿಂದಲೂ ಭಕ್ತರು ಉಡುಪಿಗೆ ಆಗಮಿಸುತ್ತಿದ್ದು, ರಥಬೀದಿ ವಾತಾವರಣ ವೈಭವೋಪೇತವಾಗಿದೆ. ಕೃಷ್ಣಮಠ ರಥೋತ್ಸವ, ಪುತ್ತಿಗೆ ಪರ್ಯಾಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಗರಕ್ಕೆ ಆಗಮಿಸುತ್ತಿದ್ದಾರೆ. ರಥಬೀದಿ, ಕೃಷ್ಣಮಠ, ಪುತ್ತಿಗೆ ಮಠ ಸಹಿತ ನಗರದಲ್ಲಿ ವಿದ್ಯುತ್ ದೀಪಾಲಂಕಾರ, ಸ್ವಾಗತ ಕಮಾನುಗಳು ಗಮನಸೆಳೆಯುತ್ತಿದೆ. ಆನಂದತೀರ್ಥ ಮಂಟಪದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸಂಜೆಯಾಗುತ್ತಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದಾರೆ.

ರಥಬೀದಿಯ ಸುತ್ತಮುತ್ತ, ಸಂಪರ್ಕ ರಸ್ತೆಗಳಲ್ಲಿ ಸ್ಥಳೀಯ ವ್ಯಾಪಾರಿಗಳು ಸಹಿತ ಹೊರ ಜಿಲ್ಲೆಗಳಿಂದ, ಜಿಲ್ಲೆಯ ಗ್ರಾಮೀಣ ಭಾಗದಿಂದ ಆಗಮಿಸಿದ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಇನ್ನು ನಗರದ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ವ್ಯಾಪಾರ ಹೆಚ್ಚಿದ್ದು, ಐದಾರು ತಿಂಗಳ ಹಿಂದೆಯೇ ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರು ನಗರದ ಲಾಡ್ಜ್‌ ಗಳಲ್ಲಿ ಬುಕ್ಕಿಂಗ್‌ ಮಾಡಿ ಕೊಠಡಿಗಳು ಬುಕ್ಕಿಂಗ್ ಆಗಿದೆ.

ನಗರದ ಸ್ವಚ್ಛತೆ, ಮುಖ್ಯ ರಸ್ತೆಗಳು, ಕೃಷ್ಣ ಮಠ ಸಂಪರ್ಕ ಒಳ ರಸ್ತೆಗಳ ಸ್ವಚ್ಛತೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಹೊರಗಡೆಯಿಂದ ಬರುವ ಪ್ರವಾಸಿಗರು, ಭಕ್ತರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ಮೊಬೈಲ್‌ ಶೌಚಾಲಯ ವ್ಯವಸ್ಥೆಗಳನ್ನು ಮಾಡಲಾಗಿದೆ.‌ ಸಹಸ್ರಾರು ಮಂದಿ ಜಮಾಯಿಸುವ ನಿರೀಕ್ಷೆಯಿದ್ದು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕ್ರಮವಹಿಸಲಾಗಿದೆ.

Comments are closed.