Uncategorized

7ನೇ ವರ್ಷದ ಹೊನಲು ಬೆಳಕಿನ “ಮಂಗಳೂರು ಕಂಬಳ”ಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು: ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಅವರ ಸಾರಥ್ಯದಲ್ಲಿ ಹೊನಲು ಬೆಳಕಿನ 7ನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ “ಮಂಗಳೂರು ಕಂಬಳ” ಡಿ. 3೦ ರ ಶನಿವಾರದಂದು ಮಂಗಳೂರಿನ ಬಂಗ್ರಕೂಳೂರು ಬಳಿ ಇರುವ ಗೋಲ್ಡ್ ಪಿಂಚ್ ಸಿಟಿಯಲ್ಲಿ ಬಹಳ ವಿಜ್ರಂಭಣೆಯಿಂದ ಆರಂಭಗೊಂಡಿತು.

ಡಿ. 3೦ರ ಬೆಳಿಗ್ಗೆ 8.3೦ಕ್ಕೆ ದಿ| ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಮಾದರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗದ ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅವರು ಮಂಗಳೂರು ಕಂಬಳವನ್ನು ಉದ್ಘಾಟಿಸಿದರು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ಬಂಟ್ವಾಳದ ಅಧ್ಯಕ್ಷರಾದ ಡಾ. ತುಕರಾಮ ಪೂಜಾರಿಯವರು ಅಧ್ಯಕ್ಷತೆ ವಹಿಸಿದ್ದರು. ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷರಾದ ಕೆ. ಚಿತ್ತರಂಜನ್ ಅವರು ದೀಪ ಪ್ರಜ್ವಲನೆಗೈದರು. ಮಾಜಿ ಸಚಿವ ಸಿ.ಟಿ ರವಿ ಸೇರಿದಂತೆ ಹಲವಾರು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜೊತೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳದ ವ್ಯವಸ್ಥಾಪಕರು,ಕಂಬಳ ಕೋಣಗಳ ಮಾಲೀಕರು ಹಾಗೂ ಜಿಲ್ಲಾ ಕಂಬಳ ಸಮಿತಿಯ ಸರ್ವಸದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ‍್ಯಕ್ರಮದಲ್ಲಿ ಮಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷರಾದ ಎಂ.ಆರ್.ಜಿ. ಗ್ರೂಪ್ ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಮಾಜಿ ಸಚಿವ ಸಿ.ಟಿ ರವಿ, ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ಅಶೋಕ್ ಕುಮಾರ್ ರೈ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶಾಸಕರು, ಮಾಜಿ ಸಚಿವರುಗಳ ಸಹಿತ ಹಲವು ಮಂದಿ ಗಣ್ಯರು ಸಭಾಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಮಂಗಳೂರು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಕೋಶಾಧಿಕಾರಿ ತಲಪಾಡಿ ದೊಡ್ಡಮನೆ ಪ್ರೀತಮ್ ರೈ, ಉಪಾಧ್ಯಕ್ಷರುಗಳಾದ ಸಂಜಯ್ ಪ್ರಭು, ಈಶ್ವರ್ ಪ್ರಸಾದ್ ಶೆಟ್ಟಿ, ಬಟ್ಟಿರ ಅಜಿತ್ ಬೋಪಯ್ಯ, ಪ್ರಕಾಶ್ ಪೂಜಾರಿ ಗರೋಡಿ, ಗೌರವ ಸಲಹೆಗಾರರಾದ ವಿಜಯ್‌ಕುಮಾರ್ ಕಂಗಿನ ಮನೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬರೋಬ್ಬರಿ 32 ಗಂಟೆಗಳ ಕಾಲ ನಡೆದ ಕಂಬಳದಲ್ಲಿ 170 ಜತೆ ಕೋಣಗಳು ಭಾಗವಹಿಸಿದ್ದವು. ಎರಡು ದಿನಗಳ ಕಾಲ ನಡೆದ ಕಂಬಳವನ್ನು ಲಕ್ಷಾಂತರ ಮಂದಿ ಕಂಬಳಾಭಿಮಾನಿಗಳು ವೀಕ್ಷಿಸಿದರು. ಹಗ್ಗದ ಕಿರಿಯ ವಿಭಾಗದಲ್ಲಿ ಬಂಬ್ರಾಣಬೈಲು ವಂದಿತ್ ಶೆಟ್ಟಿ ಅವರು 9.೦9 ಸೆಕೆಂಡ್‌ನಲ್ಲಿ ಕೋಣಗಳನ್ನು ಓಡಿಸಿ ಕೂಟ ದಾಖಲೆ ಮಾಡಿದರು. ಕನೆಹಲಗೆ 8 ಜತೆ, ಹಗ್ಗ ಹಿರಿಯ 22, ಹಗ್ಗ ಕಿರಿಯ 26, ಅಡ್ಡಹಲಗೆ 4, ನೇಗಿಲು ಹಿರಿಯ 29, ನೇಗಿಲು ಕಿರಿಯ 81 ಜತೆ ಭಾಗವಹಿಸಿದ್ದವು.

Comments are closed.