ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವು: ಮೃತರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷ ರೂ. ಪರಿಹಾರ ಘೋಷಣೆ

Pinterest LinkedIn Tumblr

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಯಲ್ಲಿ ಸಾವಿಗೀಡಾದ ಮಹಿಳೆ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 15 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಇಂದು ಕಾರ್ಮಿಕ ಮಹಿಳೆ ಮೀನಾ ಮೃತ ಪಟ್ಟಿದ್ದರು. ಈ ಕುರಿತಾಗಿ ಮೂಡಿಗೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೂಡಲೇ ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆನೆ ದಾಳಿ ಸಂಬಂಧ ಪ್ರತಿಭಟನಾಕಾರರ ಜೊತೆ ಮಾತನಾಡಿದ್ದೇನೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತೆ. ಆನೆಗಳನ್ನು ಕಾಡಿಗೆ ಓಡಿಸುವ ಪ್ರಕ್ರಿಯೆ ಆರಂಭಿಸುತ್ತೇವೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತೆ. 5 ದಿನದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಿಕ್ಕಮಗಳೂರಿಗೆ ಬರುತ್ತಾರೆ ಎಂದು ಹೇಳಿದ್ದಾರೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಫಿ ತೋಟಗಳಿಗೆ ಕಾಡಾನೆಗಳು ನುಗ್ಗುತ್ತಿವೆ. ರೈಲ್ವೆ ಬೇಲಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಯಪಡೆಗೆ ಸೂಚಿಸಲು ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದರು.

ಕಾಡಾನೆಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಸ್ಥಳೀಯರು ಹಾಗೂ ಪ್ರತಿಭಟನಾಕಾರರ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅವರನ್ನು ಸಂತೈಸಿ, ಆ ನಿಟ್ಟಿನಲ್ಲಿ ಆಲೋಚಿಸಬೇಡಿ, ಇತರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ತುರ್ತು ಸಭೆ ನಡೆಸಿ ಕಾಡಾನೆಗಳನ್ನು ಮರಳಿ ಕಾಡಿಗೆ ಕಳುಹಿಸಿ ಹಾವಳಿ ತಪ್ಪಿಸುವಂತೆ ಸೂಚಿಸಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಕಾರ್ಮಿಕ ಮಹಿಳೆ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿ. ಮೃತ ದುರ್ದೈವಿಯ ಕುಟುಂಬಕ್ಕೆ ಕೂಡಲೇ 15 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅರಣ್ಯ ಸಚಿವರು ಜಿಲ್ಲೆಗೆ ಭೇಟಿನೀಡಿ ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತಾಗಿ ಕ್ರಮ ಕೈಗೊಳ್ಳಲಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೇ ಫೆನ್ಸಿಂಗ್ ಹಾಕುವುದೂ ಸೇರಿ ಅಗತ್ಯ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜತೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Comments are closed.