ಕರಾವಳಿ

ಉಡುಪಿಯ ಪರ್ಕಳದ ಜನರಲ್ ಸ್ಟೋರ್‌ನಲ್ಲಿ ಪರವಾನಿಗೆ ಇಲ್ಲದೆ ದಾಸ್ತಾನಿರಿಸಿದ್ದ 1.20 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ

Pinterest LinkedIn Tumblr

ಉಡುಪಿ: ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ದುರಂತದ ಬಳಿಕ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಬುಧವಾರ ಪರ್ಕಳದಲ್ಲಿ ಪರವಾನಿಗೆ ಇಲ್ಲದೆ ಪಟಾಕಿ ದಾಸ್ತಾನು ಇರಿಸಿದ್ದ ಅಂಗಡಿಯ ಮೇಲೆ ದಾಳಿ ನಡೆಸಲಾಗಿದೆ.

(ಸಾಂದರ್ಭಿಕ ಚಿತ್ರ)

ಪರ್ಕಳದ ಮುಖ್ಯರಸ್ತೆಯಲ್ಲಿರುವ ಜನರಲ್ ಸ್ಟೋರ್‌ಗೆ ಮಣಿಪಾಲ ಠಾಣೆಯ ಇನ್‌ಸ್ಪೆಕ್ಟರ್‌, ತಹಶೀಲ್ದಾರ್‌ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ದಾಳಿ ನಡೆಸಿದೆ. ಈ ವೇಳೆ 766 ಕೆ.ಜಿಯ ಸುಮಾರು 1.20 ಲ.ರೂ.ಮೌಲ್ಯದ ಅಕ್ರಮ ಪಟಾಕಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಪ್ರಾವಿಜನ್‌ ಸ್ಟೋರ್‌ ಹಾಗೂ ರಸಗೊಬ್ಬರ ಮಾರಾಟ ಅಂಗಡಿಯ ಹಿಂಬದಿಯ ಗೋಡೌನ್‌ನಲ್ಲಿ ಇಪ್ಪತ್ತಕ್ಕೂ ಅಧಿಕ ಪಟಾಕಿ ಬಾಕ್ಸ್‌ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಣಿಪಾಲ‌ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್ ಟಿ.ವಿ., ಉಡುಪಿ ತಹಸೀಲ್ದಾರ್ ಭೀಮ್‌ಸೇನ್‌ ಹಾಗೂ ಉಡುಪಿ ಅಗ್ನಿಶಾಮಕ ದಳದ ಅಸಿಸ್ಟಂಟ್‌ ಪೈರ್‌ ಆಫೀಸರ್‌ ಮೀರ್‌ ಮೊಹಮ್ಮದ್‌ ಗೌಸ್‌ ಹಾಗೂ ಮಣಿಪಾಲ ಪೊಲೀಸ್‌ ಠಾಣಾ ಎಎಸ್ಐಗಳಾದ ನಾಗೇಶ ನಾಯಕ್‌, ಶೈಲೇಶ್‌, ಹೆಡ್ ಕಾನ್ಸ್‌ಟೇಬಲ್ ಪ್ರಸನ್ನ, ಮಹಿಳಾ ಸಿಬ್ಬಂದಿ ಅರುಣ ಕಾರ್ಯಾಚರಣೆ ನಡೆಸಿದ್ದರು. ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನು ಹೊಂದುವುದು, ದಾಸ್ತಾನು ಇಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದು ಅಂಗಡಿ ಮಾಲೀಕರಿಗೆ ಮನವರಿಕೆ ಮಾಡಲಾಗಿದ್ದು
ಸ್ಥಳಕ್ಕೆ ಎಫ್‌ಎಸ್‌ಎಲ್‌ ತಜ್ಞರನ್ನು ಕರೆಸಿಕೊಂಡಿದ್ದು ಅವರ ಸಹಾಯದಿಂದ ಈ ಸ್ಥಳದಿಂದ ಸಂಗ್ರಹಿಸಿದ ಸ್ವತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು.

ದಾಳಿ ಮಾಡಿದ ಸ್ಥಳವು ಪರ್ಕಳದ ರಘುರಾಮ ಜನರಲ್‌ ಸ್ಟೋರ್ಸ್‌ ಎಂಬ ಅಂಗಡಿಯಾಗಿದ್ದು ಈ ಅಂಗಡಿಗೆ ವಿದ್ಯುತ್‌ ಸಂಪರ್ಕವಿದೆ. ಸುಮಾರು 5 ಅಡಿ ಪಶ್ಚಿಮದಲ್ಲಿ ವಾಣಿಜ್ಯ ಕಟ್ಟಡವಿದ್ದು, ಪೂರ್ವದಲ್ಲಿ ಸುಮಾರು 20 ಅಡಿ ದೂರದಲ್ಲಿ ವಾಸದ ಮನೆಯಿದೆ. ಸ್ಪೋಟಕ ನಿಯಮಗಳ ಪ್ರಕಾರ ಪರವಾನಿಗೆ ಪಡೆದು ಕೆಮಿಕಲ್‌ ಕಡಿಮೆ ಇರುವ ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಬೇಕಾಗಿದ್ದು, ಪ್ರತ್ಯೇಕವಾದ ಗೋಡಾನ್‌ ಮಾಡಿ 7 ಅಡಿ ಎತ್ತರದ ಕಂಪೌಂಡನ್ನು ಗೋಡಾನಿನ ಸುತ್ತಲೂ ನಿರ್ಮಿಸಬೇಕಾಗಿದೆ. ಈ ಗೋಡಾನಿನ ಸುತ್ತಲೂ 100 ಮೀಟರ್‌ ದೂರದಲ್ಲಿ ಯಾವುದೇ ವಾಸದ ಮನೆಗಳು ಇರದಂತೆ ನಿಯಮಗಳಿದೆ. ಆದರೆ ದಾಳಿ ನಡೆದ ಸ್ಥಳದಲ್ಲಿ ಅಂಗಡಿಯ ಮಾಲೀಕರು ಯಾವುದೇ ಪರವಾನಿಗೆಯನ್ನು ಪಡೆಯದೇ ತನ್ನ ಅಂಗಡಿಯ ಕೋಣೆಯೊಳಗೆ ಸುಡುಮದ್ದುಗಳನ್ನು (ಪಟಾಕಿಗಳನ್ನು) ದಾಸ್ತಾನು ಮಾಡಿರುವುದು ಕಂಡುಬಂದದೆ. ಈ ಅಂಗಡಿಯ ಎದುರು ಸಾರ್ವಜನಿಕರು ತಿರುಗಾಡುತ್ತಿರುವ ರಸ್ತೆಯೂ ಇದೆ. ಆದುದರಿಂದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸುಡುಮದ್ದುಗಳನ್ನು (ಪಟಾಕಿಗಳನ್ನು) ದಾಸ್ತಾನು ಇಟ್ಟಿರುವ ಆರೋಪಿ ಶಿವಪ್ರಸಾದ್‌ ಠಾಕೂರ್‌ ಎಂಬವರ ವಿರುದ್ದ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Comments are closed.