ಕರಾವಳಿ

ಸಂಗೀತಗಾರ ಡಾ. ವಿದ್ಯಾಭೂಷಣರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Pinterest LinkedIn Tumblr

ಉಡುಪಿ: ಶಿವರಾಮ ಕಾರಂತರು ತಮ್ಮ ಜೀವನದಲ್ಲಿ ಕಲೆ, ಸಾಹಿತ್ಯ, ಪರಿಸರ, ಸಮಾಜಸೇವೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಇವು ಸಮಾಜಕ್ಕೆ ಮಾರ್ಗದರ್ಶನವಾಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಅವರು ಅ.10 ಬುಧವಾರದಂದು ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್ನ ಸಭಾಂಗಣದಲ್ಲಿ, ಕೋಟತಟ್ಟು ಗ್ರಾ.ಪಂ., ಡಾ.ಶಿವರಾಮ ಕಾರಂತ ಟ್ರಸ್ಟ್ (ಉಡುಪಿ), ಕೋಟದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಇಂಪನ (ಸಂಗೀತ ಸಂಪುಟದ ಸಂಚಲನ) 2023 ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಂಗೀತಗಾರ ಡಾ. ವಿದ್ಯಾಭೂಷಣರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಭಾರತೀಯ ಸಂಸ್ಕೃತಿ, ಧರ್ಮ, ಸಂಸ್ಕಾರದೊಂದಿಗೆ ಮಾನವೀಯ ಗುಣವುಳ್ಳ ಜನರು ತಯಾರಾದರೆ ಭಾರತ ವಿಶ್ವ ಗುರುವಾಗಲು ಸಾಧ್ಯ. ಕಲೆ, ಧರ್ಮ, ಸಂಸ್ಕೃತಿಯ ಸಮನ್ವಯ ಅತ್ಯಗತ್ಯವಿದ್ದು, ತುಳುನಾಡಿನ ಸಮೃದ್ಧ ವಿರಾಸತ್ ಜಗತ್ತಿಗೆ ತಲುಪಬೇಕು. ಕಲೆ, ಸಾಂಸ್ಕೃತಿಕ ವಿರಾಸತ್ ಭಾರತದ ಜೀವಾಳ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.

ಕಾರಂತರು ನಡೆದಾಡುವ ವಿಶ್ವಕೋಶವಾಗಿದ್ದರು. ಆಧುನಿಕ ಠಾಗೋರ್ ಎಂದೆನಿಸಿದ ಅವರು ತುರ್ತುಪರಿಸ್ಥಿತಿ ಸಮಯದಲ್ಲಿ ಪದ್ಮಭೂಷಣ ವಾಪಸ್ ಮಾಡಿ ದೇಶಭಕ್ತಿ ಮೆರೆದ ಇಂತಹ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಹಾದಿಯಲ್ಲಿ ಮುಂದಿನ ಪೀಳಿಗೆಯನ್ನು ಮುನ್ನಡೆಸಬೇಕು ಎಂದರು.

ಗಾಂಧೀಜಿ ಸಿದ್ಧಾಂತದಿಂದ ಪ್ರಭಾವಿತರಾದ ಕಾರಂತರು ಕಾರ್ನಾಡ್ ಸದಾಶಿವ ರಾವ್ ನೇತೃತ್ವದಲ್ಲಿ ಖಾದಿ ಸ್ವದೇಶಿ ಚಳವಳಿಯಲ್ಲಿ ನಿರತರಾಗಿದ್ದು ಎಲ್ಲರಿಗೂ ಪ್ರೇರಣಾದಾಯಕ ಎಂದರು.

ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಸಂಗೀತಗಾರ ಡಾ. ವಿದ್ಯಾಭೂಷಣ್ ಮಾತನಾಡಿ, ಕೀರ್ತಿ ಮತ್ತು ಪುರಸ್ಕಾರಗಳನ್ನು ವಶೀಕರಣದಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ನಾವು ಮಾಡಿದ ಸಾಧನೆಗೆ ಪ್ರಶಸ್ತಿ ಮತ್ತು ಪುರಸ್ಕಾರಗಳು ನಮ್ಮನ್ನು ಅರಸಿ ಬರಬೇಕು. ಕಾರಂತರ ಚಿಂತನೆಗಳು ಸಹ ಈ ರೀತಿ ಹೇಳುತ್ತವೆ ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಟದ ಕೀರ್ತಿಯನ್ನು ಜಗತ್ತಿಗೆ ಹರಡಿದ ಶ್ರೇಷ್ಠ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಕೋಟ ಶಿವರಾಮ ಕಾರಂತರು. ಅವರು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇಂದಿಗೂ ಪ್ರಸ್ತುತ ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 10 ಗ್ರಾಮ ಪಂಚಾಯತಿಗಳಾದ ಗಾಂಧಿ ಪುರಸ್ಕಾರ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಉಳೇಬೆಟ್ಟು, ಮೂಡಬಿದಿರೆಯ ಪುತ್ತಿಗೆ, ಬಂಟ್ವಾಳದ ಅಮ್ಮುಂಜೆ, ಪುತ್ತೂರಿನ ಉಪ್ಪಿನಂಗಡಿ, ಕಡಬದ ಸವಣೂರು, ಬೆಳ್ತಂಗಡಿಯ ಬಳಂಜ, ಸುಳ್ಯದ ಮರ್ಕಂಜ, ಉಳ್ಳಾಲದ ಬೆಳ್ಮ, ಮೂಲ್ಕಿಯ ಕೆಮ್ರಾಲ್ ಹಾಗೂ ಉಡುಪಿ ಬಡಗಬೆಟ್ಟು ಗ್ರಾ.ಪಂ.ಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕರಾದ ಗುರುರಾಜ್ ಗಂಟಿಹೊಳೆ, ಯಶಪಾಲ್ ಎ.ಸುವರ್ಣ ಉಡುಪಿ, ಗುರ್ಮೆ ಸುರೇಶ್ ಶೆಟ್ಟಿ ಕಾಪು, ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಕುಂದರ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್.ಶೆಣೈ, ಕೋಟ ಡಾ.ಶಿರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ಉಪಸ್ಥಿತರಿದ್ದರು.
ವಿಧಾನಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ನರೇಂದ್ರ ಕೋಟ ನಿರೂಪಿಸಿದರೆ, ಆನಂದ್ ಸಿ ಕುಂದರ್ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಕೋಟತಟ್ಟು ಗ್ರಾಮ ಪಂಚಾಯತ್‌ನಿAದ ಕೋಟ ಥೀಂ ಪಾರ್ಕ್ವರೆಗೆ ಮೆರವಣಿಗೆಯ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು.

Comments are closed.