(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಳೆದ ಭಾನುವಾರ ಪ್ರವಾಸಕ್ಕೆಂದು ಸ್ನೇಹಿತನೊಂದಿಗೆ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತಕ್ಕೆ ಬಂದು ಫಾಲ್ಸ್ ವೀಕ್ಷಣೆ ವೇಳೆ ಅಚಾನಕ್ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.

ಕಳೆದೆರಡು ದಿನಗಳಿಂದ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಮ್ಮಿಯಿದ್ದರಿಂದ ಫಾಲ್ಸ್ ನಲ್ಲಿ ಶರತ್ ಬಿದ್ದ ಸಮೀಪದ ಕಲ್ಲು ಪೊಟರೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಪ್ರಾಥಮಿಕ ಮಾಹಿತಿಗಳು ಲಭಿಸಿದೆ.
ಘಟನೆ ನಡೆದ ಜುಲೈ.23 ರವಿವಾರ ಘಟನೆ ನಡೆದಿತ್ತು. ಜಲಪಾತ ವೀಕ್ಷಣೆ ಮಾಡುತ್ತಿದ್ದಾಗಲೇ ಶರತ್ ಕಾಲು ಜಾರಿ ನೀರಿನಲ್ಲಿ ಕೊಚ್ಚಿಹೋಗಿದ್ದರು. ಅವರೊಂದಿಗಿದ್ದ ಸ್ನೇಹಿತ ಮಾಹಿತಿ ನೀಡಿದ ತರುವಾಯ ಆತನ ಪತ್ತೆಗೆ ಶೋಧ ಕಾರ್ಯ ಬಿರುಸುಗೊಂಡಿತ್ತು. ಕೊಲ್ಲೂರು ಠಾಣೆ ಉಪನಿರೀಕ್ಷಕಿಯರಾದ ಜಯಶ್ರೀ, ಸುಧಾರಾಣಿ, ಠಾಣೆ ಸಿಬ್ಬಂದಿ, ಅರಣ್ಯ ಇಲಾಖೆ, ಎಸ್.ಡಿ.ಆರ್.ಎಫ್ ತಂಡ, ಉಡುಪಿ, ಬೈಂದೂರು, ಕುಂದಾಪುರ ಅಗ್ನಿಶಾಮಕ ತಂಡದ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ವಿಪರೀತ ಮಳೆ, ಇಂಬಳದ (ಜಿಗಣೆ) ಹುಳುಗಳು, ಕಡಿದಾದ ರಸ್ತೆಯಲ್ಲಿ ಸಾಗಿ ಮೊಬೈಲ್ ನೆಟ್ವರ್ಕ್ ಸಂಪರ್ಕವೂ ಇಲ್ಲದೆ ನಿತ್ಯ ಬೆಳಿಗ್ಗೆನಿಂದ ರಾತ್ರಿ ತನಕ ಕಾರ್ಯಾಚರಣೆ ನಡೆಸಲಾಗಿತ್ತು.
ಘಟನೆ ಹಿನ್ನೆಲೆ:
ಕಳೆದ ರವಿವಾರದಂದು ಶರತ್ ಆತನ ಸ್ನೇಹಿತನೊಂದಿಗೆ ಕಾರಿನಲ್ಲಿ ಭದ್ರಾವತಿಯಿಂದ ಹೊರಟು ಕೊಲ್ಲೂರಿಗೆ ಆಗಮಿಸಿ ಕೊಲ್ಲೂರು ಗ್ರಾಮದ ಅರಶಿನ ಗುಂಡಿ ಜಲಪಾತ (ಫಾಲ್ಸ್) ನೋಡಲು ಹೋಗಿದ್ದು ಮಧ್ಯಾಹ್ನ 3:30ರ ಸುಮಾರಿಗೆ ಜಲಪಾತ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಸೌಪರ್ಣಿಕ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು.
Comments are closed.