ಕರಾವಳಿ

ಕುಂದಾಪುರದ ತ್ರಾಸಿ ಸಮುದ್ರದಲ್ಲಿ ಕೊಚ್ಚಿ ಹೋದ ಗದಗ ಮೂಲದ ಯುವಕನ ಮೃತದೇಹ ಪತ್ತೆ

Pinterest LinkedIn Tumblr

ಉಡುಪಿ: ಮಂಗಳವಾರ ಮಧ್ಯಾಹ್ನದ ವೇಳೆ ತ್ರಾಸಿ ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಅಲೆಯ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದ ಯುವಕನ ಮೃತದೇಹ ಬುಧವಾರ ಪತ್ತೆಯಾಗಿದೆ.

ಮೂಲತಃ ಗದಗದ ಪ್ರಸ್ತುತ ಕಾಪುವಿನಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಫಿರ್ ಸಾಬ್ (21) ಮೃತದೇಹ ಗುಜ್ಜಾಡಿ ಗ್ರಾಮದ ಸನ್ಯಾಸಿಬಲೆ ಎಂಬಲ್ಲಿ ಪತ್ತೆಯಾಗಿದ್ದು ಪ್ರದೇಶ ಘಟನೆ ನಡೆದ ತ್ರಾಸಿಯಿಂದ 2 ಕಿ.ಮೀ ದೂರದಲ್ಲಿದೆ.

ಘಟನೆ ವಿವರ: ಗದಗ ಜಿಲ್ಲೆಯ ನಿವಾಸಿ ಸಿರಾಜ್‌ ಎನ್ನುವರು ಲಾರಿಯನ್ನು ಚಲಾಯಿಸಿಕೊಂಡು ಕಾಪುವಿಗೆ ಬಂದಿದ್ದು ಊರಿನವರು ಬಂದಿದ್ದನ್ನು ನೋಡಿದ ಫೀರ್‌ ಸಾಬ್‌ ಹಾಗೂ ಸಿದ್ದಪ್ಪ ಎನ್ನುವರು ತಾವು ಮನೆಗೆ ಹೋಗುವುದಾಗಿ ಹೇಳಿದ್ದು ಸಿರಾಜ್‌ ಲಾರಿಯಲ್ಲಿ ಊರಿಗೆ ತೆರಳುತ್ತಿದ್ದರು. ಮಧ್ಯಾಹ್ನ 2:30 ರ ಹೊತ್ತಿಗೆ ತ್ರಾಸಿ ಬೀಚ್‌ ಬಳಿ ಕಲ್ಲುಗಳ ಮೇಲೆ ನಿಂತು ಸಮುದ್ರವನ್ನು ನೋಡುತ್ತಿದ್ದು ಫೀರ್‌ ಸಾಬ್ ಸಮುದ್ರಕ್ಕೆ ಬೆನ್ನು ಹಾಕಿ ಮೊಬೈಲ್‌ ಫೋನ್‌ ನಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ ಸಮುದ್ರದ ಅಲೆ ಅಪ್ಪಳಿಸಿ ಫೀರ್‌ ಸಾಬ್ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದರು. ಮೃತ ದೇಹಕ್ಕಾಗಿ ಮಂಗಳವಾರ ತಡರಾತ್ರಿ ತನಕ ಹುಡುಕಾಟ ನಡೆದಿತ್ತು. ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ‌24*7 ಆಪತ್ಬಾಂಧವ ಅಂಬುಲೆನ್ಸ್ ಕಾರ್ಯಕರ್ತರು ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.